ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಚುನಾವಣೆಯ ಮೀಸಲಾತಿ ಹಂಚಿಕೆಯಲ್ಲಿ ಪರಿಶಿಷ್ಟ ಪಂಗಡದ ಪುರುಷರಿಗೆ ಸ್ಪರ್ಧಿಸಲು ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿರುವ ಚೇರ್ಕಾಡಿಯ ಉಮೇಶ್ ಎ. ನಾಯ್ಕ್, ಮೀಸಲಾತಿ ಪ್ರಕ್ರಿಯೆಯನ್ನು ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ನಲ್ಲಿ ಒಟ್ಟು 28 ಸ್ಥಾನಗಳಿದ್ದು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಆದರೆ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಒಂದು ಸ್ಥಾನವನ್ನೂ ಮಹಿಳೆಯರಿಗೆ ಮೀಸಲಿಡುವ ಮೂಲಕ ಆ ವರ್ಗದ ಪುರುಷರಿಗೆ ಸ್ಪರ್ಧಿಸಲು ಯಾವುದೇ ಅವಕಾಶ ನೀಡದಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಮೀಸಲಾತಿ ಹಂಚಿಕೆಯ ವಿವರಗಳನ್ನು ಉಲ್ಲೇಖಿಸಿರುವ ಅವರು, ಪರಿಶಿಷ್ಟ ಜಾತಿಗೆ ಎರಡು ಸ್ಥಾನಗಳನ್ನು ನೀಡಲಾಗಿದ್ದು, ಅದರಲ್ಲಿ ಒಂದು ಸ್ಥಾನ ಮಹಿಳೆಗೆ ಹಾಗೂ ಇನ್ನೊಂದು ಸ್ಥಾನ ಪುರುಷರಿಗೆ ಅವಕಾಶ ಕಲ್ಪಿಸಿದೆ. ಹಿಂದುಳಿದ ವರ್ಗ (ಎ)ಗೆ ಏಳು ಸ್ಥಾನಗಳಿದ್ದು, ನಾಲ್ಕು ಮಹಿಳೆಯರಿಗೆ ಮತ್ತು ಮೂರು ಪುರುಷರಿಗೆ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗ (ಬಿ)ಗೆ ಎರಡು ಸ್ಥಾನಗಳಲ್ಲಿ ತಲಾ ಒಂದು ಸ್ಥಾನವನ್ನು ಮಹಿಳೆ ಮತ್ತು ಪುರುಷರಿಗೆ ಹಂಚಿಕೆ ಮಾಡಲಾಗಿದೆ. ಸಾಮಾನ್ಯ ವರ್ಗದ 16 ಸ್ಥಾನಗಳಲ್ಲಿ ಏಳು ಸ್ಥಾನಗಳನ್ನು ಮಹಿಳೆಯರಿಗೆ ಹಾಗೂ ಒಂಬತ್ತು ಸ್ಥಾನಗಳನ್ನು ಇತರರಿಗೆ ಮೀಸಲಿಡಲಾಗಿದೆ. ಆದರೆ, ಪರಿಶಿಷ್ಟ ಪಂಗಡದ ಏಕೈಕ ಸ್ಥಾನವನ್ನು ಮಹಿಳೆಗೆ ಮೀಸಲಿಟ್ಟಿರುವುದರಿಂದ ಪುರುಷರಿಗೆ ಅವಕಾಶವೇ ಇಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.
ಕಾಯ್ದೆಯ ಉದ್ದೇಶ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸುವುದೇ ಹೊರತು, ಪರಿಶಿಷ್ಟ ಪಂಗಡದಂತಹ ನಿರ್ದಿಷ್ಟ ವರ್ಗದಲ್ಲಿ ಶೇ. 100ರಷ್ಟು ಮೀಸಲಾತಿ ನೀಡುವುದಲ್ಲ ಎಂದು ಉಮೇಶ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಒಂದೇ ಸ್ಥಾನವಿದ್ದರೂ ಮಹಿಳೆ ಅಥವಾ ಪುರುಷ ಇಬ್ಬರಿಗೂ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕಿತ್ತು. ಈ ವಿಚಾರದಲ್ಲಿ ಹಾಸನ ಜಿಲ್ಲಾ ಪಂಚಾಯತ್ನಲ್ಲಿ ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನವಿದ್ದರೂ ಮಹಿಳೆ ಅಥವಾ ಪುರುಷ ಇಬ್ಬರಿಗೂ ಅವಕಾಶ ನೀಡಲಾಗಿದೆ ಎನ್ನಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮಾತ್ರ ವಿಭಿನ್ನ ರೀತಿಯ ಮೀಸಲಾತಿ ಅನುಸರಿಸಿರುವುದು ಇಬ್ಬಗೆಯ ನೀತಿಯಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಉಡುಪಿ ಜಿಲ್ಲಾ ಪಂಚಾಯತ್ನ ಸಾಮಾನ್ಯ ವರ್ಗದ 16 ಸ್ಥಾನಗಳಲ್ಲಿಯೂ ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶ ಕಲ್ಪಿಸಬೇಕಿತ್ತು. ಆದರೆ, ಏಳು ಸ್ಥಾನಗಳನ್ನು ಮಹಿಳೆಯರಿಗೆ ಹಾಗೂ ಒಂಬತ್ತು ಸ್ಥಾನಗಳನ್ನು ಪುರುಷರಿಗೆ ನೀಡಿರುವುದು ಮೀಸಲಾತಿ ನಿಯಮಗಳ ಪಾಲನೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡದ ಪುರುಷರಿಗೆ ದೊರೆಯಬೇಕಾದ ಅವಕಾಶವನ್ನು ನಿರಾಕರಿಸಿ, ಆ ಅವಕಾಶವನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಿರುವುದರಿಂದ ಒಂದು ವರ್ಗದ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂಬುದು ಅವರ ಆರೋಪವಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಒಟ್ಟು 102 ಸ್ಥಾನಗಳಲ್ಲಿ 59 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದು ಶೇ. 50ರ ಮಿತಿಯನ್ನು ಮೀರಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಮೀಸಲಾತಿ ಹಂಚಿಕೆಯನ್ನು ಸಮಗ್ರವಾಗಿ ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕು ಎಂದು ಉಮೇಶ್ ಎ. ನಾಯ್ಕ್ ಆಗ್ರಹಿಸಿದ್ದಾರೆ.




