Monday, June 15, 2026

ಕನ್ನಡ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು: ಈಶ ವಿಠಲದಾಸ ಸ್ವಾಮೀಜಿ ಕರೆ

ಪ್ರಸಾದ್ ರಾಜ್ ಕಾಂಚನ್‌ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ, ಎಸ್‌ಎಸ್‌ಎಲ್‌ಸಿ- ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಆಯೋಜನೆ

ಉಡುಪಿ: ಮಕ್ಕಳು ಸರ್ಟಿಫಿಕೇಟ್‌ನಲ್ಲಿ ಮಾತ್ರವಲ್ಲ, ಜೀವನದಲ್ಲೂ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸಬೇಕು. ಕನ್ನಡ ಮಾಧ್ಯಮ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿದ್ದು, ಅವು ಸಂಪೂರ್ಣವಾಗಿ ಮುಚ್ಚಿದರೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಕ್ಕೂ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜದ ಎಲ್ಲರೂ ಮುಂದಾಗಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್‌ ಅವರ ಜನ್ಮದಿನದ ಅಂಗವಾಗಿ ಪ್ರಸಾದ್ ರಾಜ್ ಕಾಂಚನ್ ಅಭಿಮಾನಿ ಬಳಗ ಹಾಗೂ ಸರಳ ಬಾಬುರಾಯ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬ್ರಹ್ಮಾವರದ ಬಂಟರ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರುಕುಲ ಪದ್ಧತಿಯ ಬಳಿಕ ಕನ್ನಡ ಮಾಧ್ಯಮ ಶಾಲೆಗಳೇ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿವೆ. ರಕ್ತ ರಸ್ತೆಯಲ್ಲಿ ಹರಿಯುವುದಕ್ಕಿಂತ ಮತ್ತೊಬ್ಬರ ಜೀವ ಉಳಿಸಲು ಬಳಸಬೇಕು ಎಂಬ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಗೆ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವತ್ತ ರಾಜಕಾರಣಿಗಳು ಗಮನಹರಿಸಬೇಕು ಎಂದು ಹೇಳಿದರು.
ತುಳುನಾಡಿನ ಹಲವು ಬ್ಯಾಂಕ್‌ಗಳು ವಿಲೀನಗೊಂಡರೂ ಜನರು ಇನ್ನೂ ಜಾತಿ ಮತ್ತು ಧರ್ಮದ ಗೋಡೆಗಳನ್ನು ಸಂಪೂರ್ಣವಾಗಿ ದಾಟಿಲ್ಲ. ಆದರೆ ಪ್ರಸಾದ್ ರಾಜ್ ಕಾಂಚನ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಜನರು ಒಂದಾಗಿ ಸೇರಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ದೇಶದ ಅಭಿವೃದ್ಧಿಗೆ ಶ್ರೀಮಂತರಿಗಿಂತ ಯುವಜನರ ಪಾತ್ರ ಮಹತ್ವದ್ದಾಗಿದೆ. 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಬಹುಪಾಲು ಯುವಕರಿದ್ದು, ಅವರಿಗೆ ನ್ಯಾಯ ಮತ್ತು ಅವಕಾಶ ದೊರೆಯಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಾಜಕೀಯಕ್ಕೆ ಬರಬೇಕು. ಆಗ ಮಾತ್ರ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ಸಾಧ್ಯ ಎಂದು ಹೇಳಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ರಾಜಕಾರಣಿಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವ ಜೊತೆಗೆ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಪೂಜಾರಿ ಹೇರೂರು, ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಅಶೋಕ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಕಾಂಗ್ರೆಸ್ ಮುಖಂಡರಾದ ಜನಾರ್ದನ ತೋನ್ಸೆ, ರಮೇಶ್‌ ಶೆಟ್ಟಿ, ಸುಧಾಕರ ಶೆಟ್ಟಿ ಮೈರ್ಮಾಡಿ, ಅಶೋಕ್‌ ಕುಮಾ‌ರ್ ಶೆಟ್ಟಿ ಮೈರ್ಮಾಡಿ, ಜ್ಯೋತಿ ಹೆಬ್ಬಾರ್, ಕೃಷ್ಣಮೂರ್ತಿ‌ ಆಚಾರ್ಯ, ಕುಶಲ್ ಬಿ. ಶೆಟ್ಟಿ, ಡಾ. ಸುನೀತಾ ಶೆಟ್ಟಿ, ಗೋಪಿಕೃಷ್ಣ ನಾಯ್ಕ್, ಮಮತಾ ಶೆಟ್ಟಿ, ಕೆ.ಪಿ. ಇಹಿಬ್ರಾಂ, ಗ್ಯಾರೇಜ್ ಯೂನಿಯನ್ ಅಧ್ಯಕ್ಷ ನಾರಾಯಣ ಪೂಜಾರಿ, ಸವಿತಾ ಸಮಾಜದ ಶಿವರಾಮ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡ ಭುಜಂಗ ಶೆಟ್ಟಿ ಬ್ರಹ್ಮಾವರ ಪ್ರಾಸ್ತಾವಿಕ ಮಾತನಾಡಿದರು. ಕಾಂಗ್ರೆಸ್ ವಕ್ತಾರೆ ವೆರೋನಿಕಾ ಕರ್ನೇಲಿಯೋ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

More like this
Related

ಮೋಸದಾಟಗಳಿಂದ ಚುನಾವಣೆ ಸೋಲು: ಕೆ. ಜಯಪ್ರಕಾಶ್ ಹೆಗ್ಡೆ

ವಂಡ್ಸೆಯಲ್ಲಿ ಕಾಂಗ್ರೆಸ್‌ನಿಂದ ಎಸ್‌ಐಆರ್ ಮತದಾರ ಪರಿಷ್ಕರಣೆ ತರಬೇತಿ ಕಾರ್ಯಕ್ರಮ ಕುಂದಾಪುರ: ದೇಶದ ವಿವಿಧ...

ಕುಂದಾಪುರ: ಬೈಕ್ ಕಳವು ಆರೋಪಿ ಬಂಧನ

ಕುಂದಾಪುರ: ಕಳೆದ ಮಾರ್ಚ್ ತಿಂಗಳಲ್ಲಿ ನಗರದ ಮನೆಯೊಂದಕ್ಕೆ ಕನ್ನ ಹಾಕಿ ನಗದು...

ವಿಕೇಂದ್ರೀಕರಣ ವ್ಯವಸ್ಥೆಯ ಅಪರೂಪದ ಚಿಂತಕ ಎಸ್.ಜನಾರ್ದನ್ ಮರವಂತೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ವಿಕೇಂದ್ರೀಕರಣ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲು ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿಗಳಲ್ಲಿ...

ಕೊಲ್ಲೂರು ದೇವಳಕ್ಕೆ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಭೇಟಿ, ವಿಶೇಷ ಪ್ರಾರ್ಥನೆ

ಕುಂದಾಪುರ: ರಿಲಾಯನ್ಸ್ ಗ್ರೂಪ್ನ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ...

Copying is disabled on Udupi Digital News.