ಕುಂದಾಪುರ: ಕಳೆದ ಮಾರ್ಚ್ ತಿಂಗಳಲ್ಲಿ ನಗರದ ಮನೆಯೊಂದಕ್ಕೆ ಕನ್ನ ಹಾಕಿ ನಗದು ಅಪಹರಣ ಮಾಡಿದ ಹಾಗೂ ಬೈಕ್ ಕಳವು ಮಾಡಿದ ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ, ಸಾವರ್ ಕುಂಡ್ಲ ತಾಲ್ಲೂಕಿನ ಲಾಲಾಜಿಬಾಯ್ ಬುದಾಬಾಯ್ (37) ಎಂಬಾತನನ್ನು ಬಂಧಿಸಿ ಆತನಿಂದ ಕಳವು ಸೊತ್ತು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ:
ಮಾ.18 ಮತ್ತು 19 ರ ಮದ್ಯಾವಧಿಯಲ್ಲಿ ಸಂಗಮ್ ಜಂಕ್ಷನ್ ಹತ್ತಿರದ ಜೆಎಮ್‌ಜೆ ವಿಲ್ಲಾ ಎಂಬ ಮನೆಯ ಎದುರಿನ ಬಾಗಿಲಿನ ಚೀಲಕವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಕಪಾಟಿನ ಬೀಗ ತೆಗೆದು ಕಪಾಟಿನಲ್ಲಿಟ್ಟಿದ್ದ ₹10,000 ನಗದು ಕಳವು ಮಾಡಿರುವ ಹಾಗೂ ಅದೇ ದಿನ ನಗರದ ವಿನಯ್ ಆಸ್ಪತ್ರೆಯ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ಇರಿಸಿದ್ದ ಅಂದಾಜು ₹20,000 ಮೌಲ್ಯದ ಮೋಟಾರು ಸೈಕಲ್ ಕಳವು ಮಾಡಿರುವ ಕುರಿತು ಪ್ರತ್ಯೇಕ ದೂರುಗಳು ದಾಖಲಾಗಿತ್ತು.
ಡಿವೈಎಸ್‌ಪಿ ಹೆಚ್.ಡಿ.ಕುಲಕರ್ಣಿ, ಪೋಲೀಸ್ ನಿರೀಕ್ಷಕರಾದ ಜಯರಾಮ್ ಡಿ ಗೌಡ ಅವರ ನಿರ್ದೇಶನದಂತೆ ಉಪ ನಿರೀಕ್ಷಕರಾದ ನಂಜಾ ನಾಯ್ಕ್, ಪುಷ್ಪ ಹಾಗೂ ಸಿಬ್ಬಂದಿಗಳಾದ ಮೋಹನ್, ಸಂತೋಷ, ಪ್ರೀನ್ಸ್, ಮಹಾಬಲ ಶೆಟ್ಟಿಗಾರ, ಸಂತೋಷ ದೇವಾಡಿಗ, ಘನಶ್ಯಾಮ್ ಅವರುಗಳಿದ್ದು ತಂಡ ಕಾರ್ಯಚರಣೆ ನಡೆಸಿ, ಮುರ್ಡೇಶ್ವರದಲ್ಲಿ ಆತನನ್ನು ಬಂಧಿಸಿ, ಆತನಿಂದ ಕಳವು ಮಾಡಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.




