Monday, June 15, 2026

ವಿಕೇಂದ್ರೀಕರಣ ವ್ಯವಸ್ಥೆಯ ಅಪರೂಪದ ಚಿಂತಕ ಎಸ್.ಜನಾರ್ದನ್ ಮರವಂತೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ವಿಕೇಂದ್ರೀಕರಣ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲು ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿಗಳಲ್ಲಿ ಎಸ್.ಜನಾರ್ದನ್ ಮರವಂತೆ ಒಬ್ಬರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಭಾನುವಾರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ರಿ., ಜನಪ್ರತಿನಿಧಿ ಪ್ರಕಾಶನ, ಸದ್ಭಾವನಾ ವೇದಿಕೆ ರಿ. ಹಾಗೂ ನಮ್ಮ ಭೂಮಿ ಹಟ್ಟಿಯಂಗಡಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪಂಚಾಯತ್ ರಾಜ್ ತಜ್ಞ ಹಾಗೂ ಹಿರಿಯ ಪತ್ರಕರ್ತ ಎಸ್.ಜನಾರ್ದನ್ ಮರವಂತೆ ಅವರ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮರವಂತೆ ಗ್ರಾಮವನ್ನೇ ತಮ್ಮ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾಗುವ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ರೂಪಿಸಲು ಅವರು ಶ್ರಮಿಸಿದ್ದರು. ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿಯಾಗಿ ನಿಂತಿದ್ದ ಅವರ ಅಗಲಿಕೆ ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಚಿಂತನೆಗಳು, ನಿಲುವುಗಳು ಮತ್ತು ಯೋಜನೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗುವಂತೆ ಕಾರ್ಯಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.

ಪಂಚಾಯತ್ ರಾಜ್ ತಜ್ಞ ಹಾಗೂ ಹಿರಿಯ ನ್ಯಾಯವಾದಿ ಟಿ.ಬಿ. ಶೆಟ್ಟಿ ಮಾತನಾಡಿ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿ ಅಪಾರ ಅನುಭವ ಸಂಪಾದಿಸಿದ್ದ ಅಪರೂಪದ ವ್ಯಕ್ತಿತ್ವ ಜನಾರ್ದನ್ ಮರವಂತೆ ಅವರದ್ದಾಗಿತ್ತು. ನೂರಾರು ಕಾಯ್ದೆಗಳ ಕುರಿತು ಅಪೂರ್ವ ಜ್ಞಾನ ಹೊಂದಿದ್ದ ಅವರು ರಮೇಶ್ ಕುಮಾರ್ ಸಮಿತಿಯಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು. ಅವರ ಸ್ಥಾನವನ್ನು ತುಂಬುವುದು ಅಸಾಧ್ಯ ಎಂದರು.

ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡ್ಕೆಕೊಡ್ಲು ಮಾತನಾಡಿ, ಸರಳತೆ ಮತ್ತು ವಿನಯದ ಪ್ರತೀಕವಾಗಿದ್ದ ಮರವಂತೆ ಅವರು ಶಿಕ್ಷಣ ಕ್ಷೇತ್ರದ ಸೇವೆಯೊಂದಿಗೆ ಪಂಚಾಯತ್ ರಾಜ್ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆ ನೀಡಿದರು. ಪ್ರಾಧ್ಯಾಪಕರಾಗಿ ನಿವೃತ್ತರಾದ ಬಳಿಕ ರಾಷ್ಟ್ರಮಟ್ಟದಲ್ಲಿ ಈ ಕ್ಷೇತ್ರಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಜನಸಾಮಾನ್ಯರಿಗೆ ಪಂಚಾಯತ್ ರಾಜ್ ಕಾಯ್ದೆಯ ಅರಿವು ಮೂಡಿಸುವಲ್ಲಿ ಅವರ ಪಾತ್ರ ಅನನ್ಯವಾಗಿತ್ತು ಎಂದು ಸ್ಮರಿಸಿದರು.

ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ, ಸಾಧನಾತ್ಮಕ ಚಿಂತನೆಯ ಹರಿಕಾರರಾಗಿದ್ದ ಜನಾರ್ದನ್ ಮರವಂತೆ ಎಲ್ಲರಿಗೂ ಸ್ಪಂದಿಸುವ ಸಹಕಾರ ಮನೋಭಾವದ ವ್ಯಕ್ತಿಯಾಗಿದ್ದರು. ಕಥೆ, ಕವನ, ಪ್ರಬಂಧ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದ ಅವರು ತಾಳಮದ್ದಲೆಯ ಅರ್ಥಗಾರರಾಗಿ ಗುರುತಿಸಿಕೊಂಡಿದ್ದರು ಎಂದು ಹೇಳಿದರು.
ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಎಸ್.ಜನಾರ್ದನ್ ಮರವಂತೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್, ಸಹಕಾರಿ ಧುರೀಣ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಪತ್ರಕರ್ತ ಶಶಿಧರ ಹೆಮ್ಮಾಡಿ, ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ಕಾರ್ಮಿಕ ಮುಖಂಡ ಎಚ್. ನರಸಿಂಹ, ಪಂಚಾಯತ್ ರಾಜ್ ತಜ್ಞ ವಿಲ್‌ಫ್ರೇಡ್ ಡಿಸೋಜ, ಉದ್ಯಮಿ ಪ್ರಶಾಂತ್ ತೋಳಾರ್, ಸಚ್ಚಿದಾನಂದ ಎಂ.ಎಲ್., ಡಾ. ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ಮೋಹನಚಂದ್ರ ಉಪ್ಪುಂದ, ಜತೀಂದ್ರ ಮರವಂತೆ, ಸದ್ಭಾವನಾ ವೇದಿಕೆಯ ಯಾಕೂಬ್ ಖಾದರ್ ಗುಲ್ವಾಡಿ, ನಮ್ಮ ಭೂಮಿ ಸಂಸ್ಥೆಯ ಸುರೇಶ್ ಹಾಗೂ ಪ್ರಾಧ್ಯಾಪಕ ರಾಮಾಂಜಿ ಅವರು ನುಡಿನಮನ ಸಲ್ಲಿಸಿದರು.

ಜನಪ್ರತಿನಿಧಿ ಪ್ರಕಾಶನದ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

More like this
Related

ಮೋಸದಾಟಗಳಿಂದ ಚುನಾವಣೆ ಸೋಲು: ಕೆ. ಜಯಪ್ರಕಾಶ್ ಹೆಗ್ಡೆ

ವಂಡ್ಸೆಯಲ್ಲಿ ಕಾಂಗ್ರೆಸ್‌ನಿಂದ ಎಸ್‌ಐಆರ್ ಮತದಾರ ಪರಿಷ್ಕರಣೆ ತರಬೇತಿ ಕಾರ್ಯಕ್ರಮ ಕುಂದಾಪುರ: ದೇಶದ ವಿವಿಧ...

ಕುಂದಾಪುರ: ಬೈಕ್ ಕಳವು ಆರೋಪಿ ಬಂಧನ

ಕುಂದಾಪುರ: ಕಳೆದ ಮಾರ್ಚ್ ತಿಂಗಳಲ್ಲಿ ನಗರದ ಮನೆಯೊಂದಕ್ಕೆ ಕನ್ನ ಹಾಕಿ ನಗದು...

ಕೊಲ್ಲೂರು ದೇವಳಕ್ಕೆ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಭೇಟಿ, ವಿಶೇಷ ಪ್ರಾರ್ಥನೆ

ಕುಂದಾಪುರ: ರಿಲಾಯನ್ಸ್ ಗ್ರೂಪ್ನ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ...

ಕನ್ನಡ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು: ಈಶ ವಿಠಲದಾಸ ಸ್ವಾಮೀಜಿ ಕರೆ

ಪ್ರಸಾದ್ ರಾಜ್ ಕಾಂಚನ್‌ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ, ಎಸ್‌ಎಸ್‌ಎಲ್‌ಸಿ- ಪಿಯುಸಿ...

Copying is disabled on Udupi Digital News.