ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್ಸೈಟ್ ಬದಲಿಗೆ, ಅಪರಿಚಿತರು ನಕಲಿ ವೆಬ್ಸೈಟ್ ಸೃಷ್ಟಿಸಿ ದೇವಳದ ಜಗದಾಂಬಿಕಾ ಅತಿಥಿ ಗೃಹದ ಕೊಠಡಿಗಳ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರಿಂದ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ (56) ನೀಡಿದ ದೂರಿನಂತೆ, ದೇವಸ್ಥಾನದ ಅಧಿಕೃತ ವೆಬ್ಸೈಟ್ಗೆ ಬದಲಾಗಿ jagadambikaguesthouse.xyz ಎಂಬ ನಕಲಿ ವೆಬ್ಸೈಟ್ ಅನ್ನು ‘hotel accommodation’ ಹೆಸರಿನಲ್ಲಿ ಅಕ್ರಮ ಲಾಭದ ಉದ್ದೇಶದಿಂದ ಸೃಷ್ಟಿಸಲಾಗಿದೆ.
ಈ ನಕಲಿ ವೆಬ್ಸೈಟ್ ಮೂಲಕ ಜಗದಾಂಬಿಕಾ ಅತಿಥಿ ಗೃಹದ ಕೊಠಡಿಗಳನ್ನು ಕಾಯ್ದಿರಿಸುವುದಾಗಿ ಭಕ್ತರನ್ನು ನಂಬಿಸಿ, ವಾಟ್ಸ್ಆಪ್ ಮೂಲಕ ಫೋನ್ಪೇ ಕ್ಯೂಆರ್ ಕೋಡ್ ಕಳುಹಿಸಿ ಹಣ ಪಡೆಯಲಾಗುತ್ತಿತ್ತು. ಬಳಿಕ ನಕಲಿ ರಶೀದಿಗಳನ್ನು ನೀಡಿ, ದೇವಸ್ಥಾನದ ಕೊಠಡಿಗಳ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರಿಗೆ ವಂಚಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




