Wednesday, September 16, 2026

ಎದೆ ಝಲ್ಲೆನಿಸುವ ದೃಶ್ಯ! ಶೆಟ್ರಕಟ್ಟೆ ಅಪಘಾತದ ಭೀಕರತೆ ಸಿಸಿ ಕ್ಯಾಮೆರಾದಲ್ಲಿ ಸೆರೆ

ಕುಂದಾಪುರ: ಶೆಟ್ರಕಟ್ಟೆ ಪಾಯಕಾರಿ ತಿರುವಿನಲ್ಲಿ ನಡೆದ ಟಿಪ್ಪರ್ ಹಾಗೂ ಸರ್ಕಾರಿ ಬಸ್ ಭೀಕರ ಅಪಘಾತದ ದೃಶ್ಯ ರಸ್ತೆ ಸಮೀಪದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ದೃಶ್ಯಾವಳಿಗಳು ಎದೆ ಝಲ್ಲೆನಿಸುವಂತಿದೆ. ಅಪಘಾತದ ಬಳಿಕ ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಬಸ್-ಟಿಪ್ಪರ್ ಅಪಘಾತದಲ್ಲಿ ಮೂವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಕುಂದಾಪುರದ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಚನಾ‌(16)  ಮತ್ತು ಚೈತ್ರಾ (16) ಚಿಂತಾಜನಕಸ್ಥಿತಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಎಲ್ಲಾ ಗಾಯಾಳುಗಳು ಕುಂದಾಪುರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ಸು ಚಾಲಕನ ಸಮಯಪ್ರಜ್ಙೆ:
ಬಸ್ ಚಾಲಕ ಹನುಮಂತ ವೇಗವಾಗಿ ಬರುತ್ತಿದ್ದ ಟಿಪ್ಪರಿನ ರಭಸವನ್ನು ನೋಡಿ ಅಪಘಾತದ ಮುನ್ಸೂಚನೆ ಅರಿತು ಹಠಾತ್ತನೆ ಎಡಬದಿಗೆ ತಿರುಗಿಸಿ ಬಸ್ಸಿನ ಎದುರು ಭಾಗವನ್ನು ತಪ್ಪಿಸಲು ಯಶಸ್ವಿಯಾದರಾದರೂ ಕೊನೆಯ ಕ್ಷಣದಲ್ಲಿ ಬಸ್ಸಿನ ಹಿಂಭಾಗಕ್ಕೆ ಅಡ್ಡವಾಗಿ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

ಮಾನವೀಯತೆ ಮೆರೆದ ಯುವಕ:
ಅಪಘಾತವಾದ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಚಿಕತ್ಸೆಯ ಅವಶ್ಯಕತೆಗಳಿದ್ದಾಗ ಸ್ಥಳೀಯರಾದ ಪ್ರಶಾಂತ ಪೂಜಾರಿ ಕರ್ಕಿ ಮುಂತಾದವರು ತಮ್ಮ ಸ್ವಂತ ವಾಹನಗಳಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ತೋರಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಅಪಾಯಕಾರಿ ತಿರುವು:
ಶೆಟ್ರಕಟ್ಟೆ ಪೆಟ್ರೋಲ್ ಬಂಕ್ ಬಳಿಯ ತಿರುವು ಅಪಾಯಕಾರಿಯಾಗಿದ್ದು, ಈ ಹಿಂದೆಯೂ ಈ ಭಾಗದಲ್ಲಿ ಸಾಕಷ್ಟು ಅಪಾಯಗಳು ಸಂಭವಿಸಿವೆ. ತಿರುವಿನಲ್ಲಿ ರಸ್ತೆಯ ಮಗ್ಗಲುಗಳಲ್ಲಿ ಬೆಳೆದುನಿಂತ ಮರಗಳಿದ್ದ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ದೊಡ್ಡ ದುರಂತ ತಪ್ಪಿಸಿದ ಪರೀಕ್ಷೆ:
ಪ್ರತಿದಿನ ನೇರಳಕಟ್ಟೆ, ಆಜ್ರಿ ಭಾಗಗಳಿಗೆ ಕುಂದಾಪುರದ ಶಾಲಾ-ಕಾಲೇಜಿನಿಂದ ವಿದ್ಯಾರ್ಥಿಗಳು ತೆರಳುತ್ತಿದ್ದು, ಇಂದು ಪರೀಕ್ಷೆ ಇದ್ದ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಮಧ್ಯಾಹ್ನ ಮೂರು ಗಂಟೆಯೊಳಗೆ ಪರೀಕ್ಷೆ ಮುಗಿಸಿ ಮನೆಗೆ ತೆರಳಿದ್ದರಿಂದ ಅಪಘಾತದಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅಪಾಯವಾಗುವುದು ತಪ್ಪಿದೆ ಎನ್ನಲಾಗಿದೆ.

ಕುಂದಾಪುರ ಹಾಗೂ ಮಣಿಪಾಲದ ಆಸ್ಪತ್ರೆಗೆ ಭೇಟಿ ನೀಡಿದ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಹಾಗೂ ಎಂ.ಕಿರಣ್ ಕುಮಾ‌ರ್ ಕೊಡ್ಡಿ ಅವರು, ಗಾಯಾಳುಗಳನ್ನು ಹಾಗೂ ಕುಟುಂಬಿಕರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಎಸ್ಪಿ ಭೇಟಿ : ಅಪಘಾತದ ಮಾಹಿತಿ ಪಡೆದುಕೊಂಡ ಎಸ್‌ಪಿ ಹರಿರಾಮ್ ಶಂಕರ್ ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕುಂದಾಪುರದ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಡಿವೈಎಸ್‌ಪಿ ಹೆಚ್.ಡಿ.ಕುಲಕರ್ಣಿ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ತಾಲ್ಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ ಕೆ, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಕುಂದಾಪುರ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಉಪ ನಿರೀಕ್ಷಕರುಗಳಾದ ನಾಸೀರ್ ಹುಸೇನ್, ಚಂದ್ರಕಲಾ, ಪುಷ್ಪಾ, ಸಂಚಾರಿ ಠಾಣಾ ಎಸ್‌ಐ ಸುಧಾ ಪ್ರಭು ಇದ್ದರು.

More like this
Related

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು – ರಮೇಶ್ ಕಾಂಚನ್

ಉಡುಪಿ: ಕಡಲನಗರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸರ್ಕಾರದ ಆಡಳಿತವನ್ನು...

ಸೆ. 18 ರಂದು ಹೆಬ್ರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ, ಕಸ್ತೂರಿ ರಂಗನ್ ವರದಿ ಕುರಿತು ಸಭೆ

ಉಡುಪಿ: ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯ...

ಸೆ. 17ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕೊಳ್ಕೆಬೈಲು ಕಿಶನ್ ಹೆಗ್ಡೆ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೊಳ್ಕೆಬೈಲು ಕಿಶನ್...

ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ: ಒಂದೇ ಕುಟುಂಬದ ಮೂವರು ಮೃತ್ಯು

ಸ್ವಗ್ರಾಮದಲ್ಲಿ ಚೌತಿ ಹಬ್ಬ ಮುಗಿಸಿ ಊರಿಗೆ ಮರಳುತ್ತಿದ್ದ ವೇಳೆ ದುರ್ಘಟನೆ ಮಂಡ್ಯ: ದ್ವಿಚಕ್ರ...

Copying is disabled on Udupi Digital News.