ಗ್ರಾಮಸ್ಥರು, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದಲ್ಲಿ ಸರಕಾರಿ ಶಾಲೆಗಳ ಉಳಿವು ಸಾದ್ಯ: ತಗ್ಗರ್ಸೆ ಬಾಬು ಹೆಗ್ಡೆ
ಯುಡಿ ನ್ಯೂಸ್ ಡಾಟ್ ಕಾಮ್
ಕುಂದಾಪುರ: ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಆಗಬೇಕು. ಪ್ರತೀಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮಕ್ಕಳಿಲ್ಲದೇ ಅನೇಕ ಸರಕಾರಿ ಶಾಲೆಗಳನ್ನು ಇಂದು ಮುಚ್ಚುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಗ್ಗರ್ಸೆ ಬಾಬು ಹೆಗ್ಡೆ ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ಕುಂಜೆ ಶಾಲಾ ವಾರ್ಷಿಕೋತ್ಸವ ಹೊಂಗಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಇಂದು ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಆದರೂ ಸಹ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಗ್ರಾಮಸ್ಥರು, ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಇಂದು ಆಂಗ್ಲ ಮಾಧ್ಯಮ ಶಾಲೆಗಳಿಗೆ ನಾವೇ ಹಣವನ್ನು ಕೊಟ್ಟು ಶಿಕ್ಷಕರ ಸಂಬಳವನ್ನು ಕೊಟ್ಟು ಶಾಲೆಗಳನ್ನು ನಡೆಸುವಂತೆ ಮಾಡಿ ನಮ್ಮ ಮಕ್ಕಳನ್ನು ಅವರ ಶಾಲೆಗೆ ಕಳುಸುತ್ತೇವೆ. ಆದರೆ ಇಂದು ಸರಕಾರಿ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ ಬಹಳಷ್ಟು ಮೆರಿಟ್‍ನ ಶಿಕ್ಷಕರು ಬರುತ್ತಿದ್ದಾರೆ ಆದರೆ ನಾವು ಅದರ ಉಪಯೋಗವನ್ನು ಪಡೆದುಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲರೂ ಪ್ರಯತ್ನವನ್ನು ಮಾಡಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎಂದರು.
ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ ಕುಮಾರ್ ಶೆಟ್ಟಿ ಜಾಡ್ಕಟ್ಟು, ಹಿರಿಯರಾದ ನಾರಾಯಣ ನಾಯಕ್ ನೇರಳಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಶೆಟ್ಟಿ ಹಂದಕುಂದ, ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬಾಂಡ್ಯ, ಕರ್ಕುಂಜೆ ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ ಶೆಟ್ಟಿ ಜೆಡ್ಡಿನಕೊಡ್ಲು, ಸಂತೋಷ ಪೂಜಾರಿ, ಸತೀಶ ಪೂಜಾರಿ, ಉದ್ಯಮಿ ಜಯಸೂರ್ಯ ಪೂಜಾರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲಾಗೌರವ ಅಧ್ಯಕ್ಷ ವಿಶ್ವನಾಥ ಪೂಜಾರಿ, ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷ ಚಂದ್ರಶೇಖರ ಆಚಾರ್ಯ, ವಿದ್ಯಾರ್ಥಿ ನಾಯಕಿ ಶ್ರೇಯಾ ವಿ. ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೋಠಾರಿ ಪ್ರಾಸ್ತಾವಿಕ ಮಾತನಾಡಿದರು. ಪರ್ತಕರ್ತ ಎ.ಭಾಸ್ಕರ ಶೆಟ್ಟಿ ಸ್ವಸ್ತಿ ವಾಚನ ನೆರವೇರಿಸಿದರು, ಮುಖ್ಯ ಶಿಕ್ಷಕ ಚಂದ್ರ ಶೆಟ್ಟಿ ವರದಿ ವಾಚಿಸಿದರು, ಸಹ ಶಿಕ್ಷಕಿ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.




