Wednesday, September 16, 2026

ಕೆರೆಕಟ್ಟೆ ಸಂತ ಅಂತೋನಿಯರ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರ ಆಶ್ರಮದ ಉದ್ಘಾಟನೆ

ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥವಿಲ್ಲ : ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿಸೋಜಾ

ಕುಂದಾಪುರ:
ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಅಪೇಕ್ಷೆ ಅಥವಾ ಷರತ್ತುಗಳಿರುವುದಿಲ್ಲ. ದೇವರ ಪ್ರೀತಿಯನ್ನು ಅನುಭವಿಸಲು ನಾವು ಯಾವುದೇ ದೊಡ್ಡ ಸಾಧನೆಗಳನ್ನು ಮಾಡಬೇಕಾಗಿಲ್ಲ. ಬದಲಾಗಿ, ಶುದ್ಧವಾದ ಮನಸ್ಸು ಮತ್ತು ಭಕ್ತಿಯಿಂದ ದೇವರನ್ನು ನೆನೆದರೆ ಸಾಕು. ಆತನ ಪ್ರೀತಿಯು ನಮಗೆ ಕಷ್ಟದ ಸಮಯದಲ್ಲಿ ಧೈರ್ಯವನ್ನು, ನೋವಿನಲ್ಲಿ ಸಾಂತ್ವನವನ್ನು ನೀಡುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.

ಅವರು ಶನಿವಾರ ಸಿದ್ದಾಪುರ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಿದ ನೂತನ ಆಶ್ರಮವನ್ನು ಉದ್ಘಾಟಿಸಿ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು.

ಮಾನವರ ಪ್ರೀತಿಯು ಕೆಲವೊಮ್ಮೆ ಕೊನೆಗೊಳ್ಳಬಹುದು, ಆದರೆ ದೈವಿಕ ಪ್ರೀತಿಯು ಎಂದಿಗೂ ಕೊನೆಯಾಗುವುದಿಲ್ಲ. ನಾವು ತಪ್ಪುಗಳನ್ನು ಮಾಡಿದಾಗಲೂ ದೇವರು ನಮ್ಮನ್ನು ಕ್ಷಮಿಸಿ, ಸರಿ ದಾರಿಯಲ್ಲಿ ನಡೆಸುತ್ತಾನೆ. ನಿಸ್ವಾರ್ಥವಾಗಿ ಹಾಗೂ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸಹಾಯ ಮಾಡಿದಾಗ, ಅದರಿಂದ ಬರುವ ಸತ್ಫಲವು ನಿಮ್ಮ ಜೀವನವನ್ನು ರಕ್ಷಿಸುತ್ತದೆ ಮತ್ತು ಒಳಿತನ್ನು ಮಾಡುತ್ತದೆ.

ದೇವರ ಹೆಸರಿನಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಬಡವರಿಗೆ ಮತ್ತು ನಿರ್ಗತಿಕರಿಗೆ ಮಾಡುವ ಸೇವೆಗೆ ಪ್ರತಿಫಲ ಖಂಡಿತವಾಗಿ ಸಿಗುತ್ತದೆ. ನಿಸ್ವಾರ್ಥ ಸೇವೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮನುಷ್ಯನಿಗೆ ಒಳ್ಳೆಯದನ್ನು ಮಾಡುತ್ತದೆ ಎಂದರು.

ಧರ್ಮಪ್ರಾಂತ್ಯದಲ್ಲಿ ಜನರ ಆಧ್ಯಾತ್ಮಿಕ ಬೆಳವಣಿಗೆಗೆ ಮೊದಲ ಆದ್ಯತೆಯಾಗಿ ಶ್ರಮಿಸುವುದರೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಲು ಪ್ರಯತ್ನಿಸುವುದರೊಂದಿಗೆ ಧರ್ಮಪ್ರಾಂತ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕುರಿತು ಚಿಂತನೆ ನಡೆಸಲಾಗಿದೆ. ಭಕ್ತರ ಹಾಗೂ ಉದಾರ ಮನಸ್ಸಿನ ದಾನಿಗಳು ಇಂತಹ ಉತ್ತಮ ಕಾರ್ಯಕ್ಕೆ ಕೈ ಜೋಡಿಸಿದರು ಕನಸು ನನಸಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ ಎಂದರು

ಮಹಾಪೋಷಕರಾದ ಫಿಲಿಪ್ ಡಿಕೋಸ್ತಾ ಬಸ್ರೂರು ನೂತನ ಆಶ್ರಮವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಆಶ್ರಮದ ನಿರ್ಮಾಣಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಮತ್ತು ಮಹೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಪುಣ್ಯಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರನ್ನು ಹಾಗೂ ಶ್ರೇಷ್ಠಗುರುಗಳನ್ನು ಹಾಗೂ ಕ್ಷೇತ್ರದ ರೆಕ್ಟರ್, ಆಶ್ರಮದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆಯನ್ನು ಗೌರವಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಝೇವಿಯರ್ ಲೂವಿಸ್, ಕುಲಪತಿ ವಂ|ಸ್ಟೀವನ್ ಡಿಸೋಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಪಾವ್ಲ್ ರೇಗೊ, ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆ ಸಿ|ಎಲ್ಸಿ ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದಿಂದ ಆಗಮಿಸಿದ ಧರ್ಮಗುರುಗಳು, 6000ಕ್ಕೂ ಅಧಿಕ ಭಕ್ತಾದಿಗಳು ಉಪಸ್ಥಿತರಿದ್ದರು.

ಪುಣ್ಯಕ್ಷೇತ್ರದ ರೆಕ್ಟರ್ ವಂ|ಸುನಿಲ್ ವೇಗಸ್ ಸರ್ವರನ್ನು ವಂದಿಸಿದರು. ವಂ|ರೋಯ್ ಲೋಬೊ ಹಾಗೂ ವಂ|ವಿಲ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


More like this
Related

ಕರಾವಳಿ ಅಭಿವೃದ್ಧಿಗೆ ಸಂಪುಟ ಸಭೆ ಹೊಸ ಮುನ್ನುಡಿ: ಪ್ರಸಾದ್ ರಾಜ್ ಕಾಂಚನ್

ಉಡುಪಿ–ದಕ್ಷಿಣ ಕನ್ನಡ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ನಿರ್ಣಯಗಳು ಬಲ ನೀಡುವ ನಿರೀಕ್ಷೆ;...

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು – ರಮೇಶ್ ಕಾಂಚನ್

ಉಡುಪಿ: ಕಡಲನಗರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸರ್ಕಾರದ ಆಡಳಿತವನ್ನು...

ಸೆ. 18 ರಂದು ಹೆಬ್ರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ, ಕಸ್ತೂರಿ ರಂಗನ್ ವರದಿ ಕುರಿತು ಸಭೆ

ಉಡುಪಿ: ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯ...

ಸೆ. 17ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕೊಳ್ಕೆಬೈಲು ಕಿಶನ್ ಹೆಗ್ಡೆ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೊಳ್ಕೆಬೈಲು ಕಿಶನ್...

Copying is disabled on Udupi Digital News.