ಕುಂದಾಪುರ: ತಾಲೂಕಿನ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದ ‘ಚೇತನಾ ರಿಕ್ಷಾ ನಿಲ್ದಾಣ’ವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದು, ಅದರಂತೆ ಮಂಗಳವಾರ ಕುಂದಾಪುರ ಪೊಲೀಸರು ಹಾಗೂ ಕೋಟೇಶ್ವರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸಿದರು. ಈ ಬೆಳವಣಿಗೆಯಿಂದ 21 ರಿಕ್ಷಾ ಚಾಲಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಚಾಲಕರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ರಿಕ್ಷಾ ನಿಲ್ದಾಣದ ಪಕ್ಕದಲ್ಲಿರುವ ಖಾಸಗಿ ಕಟ್ಟಡದ ಮಾಲೀಕರು, ತಮ್ಮ ಕಟ್ಟಡಕ್ಕೆ ಬರುವ ಗ್ರಾಹಕರಿಗೆ ರಿಕ್ಷಾ ನಿಲ್ದಾಣದಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಕೋಟೇಶ್ವರ ಗ್ರಾಮ ಪಂಚಾಯಿತಿಗೆ ರಿಕ್ಷಾ ನಿಲ್ದಾಣ ತೆರವುಗೊಳಿಸುವಂತೆ ನಿರ್ದೇಶನ ನೀಡಿತ್ತು.
ಇದರಂತೆ ಕೆಲ ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸ್ಥಳ ಪರಿಶೀಲನೆ ನಡೆಸಿ, ನ್ಯಾಯಾಲಯದ ಆದೇಶದ ಸೂಚನಾ ಫಲಕ ಅಳವಡಿಸಿ ರಿಕ್ಷಾ ಚಾಲಕರಿಗೆ ನೋಟಿಸ್ ನೀಡಿದ್ದರು. ಆದರೂ ರಿಕ್ಷಾಗಳು ಅದೇ ಸ್ಥಳದಲ್ಲಿ ನಿಲುಗಡೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ಮತ್ತೊಮ್ಮೆ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯವು ಕುಂದಾಪುರ ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ, ಪಿಎಸ್‌ಐಗಳಾದ ನಂಜಾ ನಾಯ್ಕ್, ಅನೂಪ್ ಕುಮಾರ್, ಸುಧಾಪ್ರಭು, ಕೋಟೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ದಿನೇಶ್ ನಾಯ್ಕ್ ಸೇರಿದಂತೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ರಿಕ್ಷಾ ನಿಲ್ದಾಣದ ನಾಮಫಲಕಗಳನ್ನು ತೆರವುಗೊಳಿಸಿ, ಸ್ಥಳದಲ್ಲಿ ‘ನೋ ಪಾರ್ಕಿಂಗ್’ ಫಲಕಗಳನ್ನು ಅಳವಡಿಸಿದರು.
ರಿಕ್ಷಾ ಚಾಲಕರು ಪ್ರತಿಕ್ರಿಯಿಸಿ, ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ಜಾಗದಲ್ಲಿ ಕಳೆದ 40 ವರ್ಷಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟುಮಾಡದೆ ಸೇವೆ ನೀಡುತ್ತಿದ್ದೇವೆ. 2003ರಲ್ಲಿ ಅಂದಿನ ದೇವಸ್ಥಾನದ ಆಡಳಿತ ಧರ್ಮದರ್ಶಿ ಹಾಗೂ ಇಂದಿನ ಧರ್ಮದರ್ಶಿ ಗೋಪಾಲ ಶೆಟ್ಟಿ ಮಾರ್ಕೋಡು, ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ಶೇಖರಪ್ಪ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಚೇತನಾ ರಿಕ್ಷಾ ನಿಲ್ದಾಣ ಉದ್ಘಾಟನೆಯಾಗಿತ್ತು ಎಂದು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶಕ್ಕೆ ತಲೆಬಾಗಿದ್ದೇವೆ. ಆದರೆ, ಈ ತೆರವು ಕಾರ್ಯಾಚರಣೆಯಿಂದ 21 ಕುಟುಂಬಗಳ ಜೀವನೋಪಾಯಕ್ಕೆ ಧಕ್ಕೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಮಗೆ ಪರ್ಯಾಯ ರಿಕ್ಷಾ ನಿಲ್ದಾಣದ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಜನಸೇವೆಯಲ್ಲಿ ತೊಡಗಿರುವ ರಿಕ್ಷಾ ಚಾಲಕರು ಮತ್ತು ಅವರ ಕುಟುಂಬಗಳಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಒದಗಿಸುವ ಜೊತೆಗೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಾಗರಿಕರೊಂದಿಗೆ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಶೇಖರ ಮಠದಬೆಟ್ಟು ಮಾತನಾಡಿ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದು, ಇದರಿಂದ ದೇವಸ್ಥಾನದ ರಥೋತ್ಸವದ ವೇಳೆ ಸಮಸ್ಯೆಗಳು ಉಂಟಾಗುತ್ತಿವೆ. ಈ ಸಂಬಂಧ 2005ರಲ್ಲೇ ಹೈಕೋರ್ಟ್ ತಹಶೀಲ್ದಾರ್‌ಗೆ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರೂ ಅದು ಇನ್ನೂ ಜಾರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾಮಾನ್ಯ ರಿಕ್ಷಾ ಚಾಲಕರನ್ನು ಮಾತ್ರ ತೆರವುಗೊಳಿಸಿರುವುದು ದುರದೃಷ್ಟಕರ. ಮೊದಲು ದೇವಳದ ಜಾಗದ ಒತ್ತುವರಿಯನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.




