Sunday, September 13, 2026

ಸಾಮಾಜಿಕ ಭದ್ರತಾ ಯೋಜನೆಗಳ ಆದಾಯ ಮಿತಿಯನ್ನು ರೂ. 1.20 ಲಕ್ಷಕ್ಕೆ ಹೆಚ್ಚಿಸಲು ಶಾಸಕ ಯಶ್ಪಾಲ್ ಸುವರ್ಣ ಮನವಿ

ರಾಜ್ಯದಲ್ಲಿ ಹಿರಿಯ ನಾಗರಿಕರು, ವಿಧವೆಯರು, ವಿಶೇಷಚೇತನರು ಹಾಗೂ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ ನೆರವಾಗುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು ಪ್ರಸ್ತುತ ಇರುವ ₹32,000 ದಿಂದ ₹1.20 ಲಕ್ಷಕ್ಕೆ ಹೆಚ್ಚಿಸುವಂತೆ ಶಾಸಕ ಯಶ್ಪಾಲ್ ಸುವರ್ಣ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಮಾಸಾಶನ ಹಾಗೂ ವಿಧವಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಬಡವರು ಮತ್ತು ದುರ್ಬಲ ವರ್ಗದವರ ಜೀವನಕ್ಕೆ ಪ್ರಮುಖ ಆಧಾರವಾಗಿವೆ. ಆದರೆ, ಪ್ರಸ್ತುತ ಆದಾಯ ಮಿತಿ ಕೇವಲ ₹32,000 ಇರುವುದರಿಂದ, ಇಂದಿನ ದುಬಾರಿ ಜೀವನದಲ್ಲಿ ಅನೇಕ ಅರ್ಹ ಫಲಾನುಭವಿಗಳು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆಹಾರ, ಔಷಧಿ ಹಾಗೂ ವೈದ್ಯಕೀಯ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಹಿರಿಯರಿಗೆ ಕುಟುಂಬದ ಒಟ್ಟು ಆದಾಯ ₹32,000ಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಮಾತ್ರ ಪಿಂಚಣಿ ತಡೆಹಿಡಿಯುವುದು ಅಥವಾ ರದ್ದುಗೊಳಿಸುವುದು ಅವೈಜ್ಞಾನಿಕ ಕ್ರಮವಾಗಿದೆ. ಫಲಾನುಭವಿಯ ವೈಯಕ್ತಿಕ ಆದಾಯ, ವಯಸ್ಸು, ಆರೋಗ್ಯ ಪರಿಸ್ಥಿತಿ ಹಾಗೂ ವಾಸ್ತವಿಕ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಅರ್ಹತೆಯನ್ನು ನಿರ್ಧರಿಸಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಪಿಂಚಣಿ ಸ್ಥಗಿತಗೊಂಡಿರುವುದರಿಂದ ಫಲಾನುಭವಿಗಳು ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಶಾಸಕರ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಅರ್ಹ ಪಿಂಚಣಿ ಫಲಾನುಭವಿಗಳ ಮಾಸಾಶನವನ್ನು ತಕ್ಷಣ ಮುಂದುವರಿಸಿ, ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯರು ಹಾಗೂ ದುರ್ಬಲ ವರ್ಗದವರಿಗೆ ಸರ್ಕಾರ ನೆಮ್ಮದಿ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದೇ ವೇಳೆ, ಪ್ರಸ್ತುತ ನೀಡಲಾಗುತ್ತಿರುವ ಮಾಸಾಶನದ ಮೊತ್ತವೂ ಇಂದಿನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ವೃದ್ಧಾಪ್ಯ ವೇತನ ₹600, ಸಂಧ್ಯಾ ಸುರಕ್ಷಾ ಯೋಜನೆಯ ₹1,200 ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಮಾಸಾಶನಗಳನ್ನು ಕನಿಷ್ಠ ದುಪ್ಪಟ್ಟುಗೊಳಿಸಿ, ಬೆಲೆ ಏರಿಕೆಗೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

More like this
Related

ಠಾಣೆಗೆ ನುಗ್ಗಿದರೆ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆ ಉಚಿತ : ಪ್ರತಾಪ್ ಸಿಂಹ ಹೆಸರು ಹೇಳದೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಬೆಂಗಳೂರು: ಮೈಸೂರಿನ ಕಡೆಯ ‘ಪೇಟೆ ರೌಡಿ’ಯೊಬ್ಬ ಪೊಲೀಸರನ್ನು ಬೆದರಿಸುವ ಮಾತುಗಳನ್ನಾಡಿದ್ದಾನೆ. ಕಾನೂನು...

ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವಕ್ಕೆ ವಜ್ರ ಮಹೋತ್ಸವದ ಸಂಭ್ರಮ

ವಜ್ರ ಮಹೋತ್ಸವದ ಅಂಗವಾಗಿ ‘ರಾಜ ದರ್ಬಾರ್’ ವೇದಿಕೆ ನಿರ್ಮಾಣ ಉಡುಪಿ: ಕಡಿಯಾಳಿ ಸಾರ್ವಜನಿಕ...

ಕರಾವಳಿ ಸಚಿವ ಸಂಪುಟ ಸಭೆ: ₹5,000 ಕೋಟಿ ವಿಶೇಷ ಪ್ಯಾಕೇಜ್ ಸೇರಿ ಪ್ರಮುಖ ಬೇಡಿಕೆಗಳಿಗೆ ಶಾಸಕ ಮಂಜುನಾಥ್ ಭಂಡಾರಿ ಮನವಿ

ಮಂಗಳೂರು: ಕರಾವಳಿ ಭಾಗದ ಸುದೀರ್ಘ ಬೇಡಿಕೆಗಳು ಹಾಗೂ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ...

ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಶಿಕ್ಷಕರ ದಿನಾಚರಣೆ

ಶಿಕ್ಷಕರು ವಿದ್ಯಾರ್ಥಿಗಳನ್ನು ಮಾನವರನ್ನಾಗಿ ರೂಪಿಸುವ ಸಮಾಜದ ಶಿಲ್ಪಿಗಳು : ವಂ. ಫ್ರಾನ್ಸಿಸ್...

Copying is disabled on Udupi Digital News.