Sunday, October 4, 2026

ಎಂ ಆರ್ ಪಿ ಎಲ್ ಸ್ಪೋಟ: ಮೃತ ಮನೀಶ್ ಕರ್ಕಡ ನಿವಾಸಕ್ಕೆ, ಕಳವಾರು ಚರ್ಚಿಗೆ ಸಿಡಿಸಿ ನಿರ್ದೇಶಕ ಪ್ರಶಾಂತ್ ಜತ್ತನ್ನ ಭೇಟಿ

ಸ್ಪೋಟದಲ್ಲಿ ಹಾನಿಗೊಳಗಾದ ಕಳವಾರು ಸಂತ ಜೋಸೇಫರ ಚರ್ಚಿಗೆ ಭೇಟಿ, ನಷ್ಟದ ಕುರಿತು ಧರ್ಮಗುರುಗಳಿಂದ ಮಾಹಿತಿ

ಉಡುಪಿ: ಎಂ ಆರ್ ಪಿ ಎಲ್ ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್ಟಿಯು)ನಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟ ಮುಲ್ಕಿ ಹಳೆಯಂಗಡಿ ನಿವಾಸಿ ಯುವಕ ಮನೀಶ್ ಕರ್ಕಡ ಅವರ ಮನೆಗೆ ಹಾಗೂ ಸ್ಪೋಟದಲ್ಲಿ ಹಾನಿಗೊಳಗಾದ ಕಳವಾರು ಸಂತ ಜೋಸೇಫರ ಚರ್ಚಿಗೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಭೇಟಿ ನೀಡಿದರು.

ಮೃತಪಟ್ಟ ಯುವಕ ಮನೀಶ್ ಕರ್ಕಡ ಹೆತ್ತವರಿಗೆ ಸಾಂತ್ವಾನ ಹೇಳಿದರು ಬಳಿಕ ಕಳವಾರು ಸಂತ ಜೋಸೇಫರ ಚರ್ಚಿಗೆ ಭೇಟಿ ನೀಡಿ ಚರ್ಚಿನ ಧರ್ಮಗುರು ವಂ|ಮೈಕಲ್ ಅವರೊಂದಿಗೆ ಘಟನೆಯಲ್ಲಿ ಚರ್ಚಿಗೆ ಆಗಿರುವ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅವರು ಎಂ ಆರ್ ಪಿ ಎಲ್ ನ ಮೂರನೇ ಘಟಕದಲ್ಲಿ ಕಳೆದ ಬುಧವಾರ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್ಟಿಯು)ನಲ್ಲಿ ಭೀಕರವಾದ ಸ್ಪೋಟ ಸಂಭವಿಸಿದ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಲ್ಕಿ ಹಳೆಯಂಗಡಿ ನಿವಾಸಿ ಸಮುದಾಯದ ಯುವಕ ಮನೀಶ್ ಕರ್ಕಡ ಮೃತಪಟ್ಟಿದ್ದಾರೆ. ಸಮುದಾಯದ ಯುವಕ ಮನೀಶ್ ಕರ್ಕಡ ಸಾವನಪ್ಪಿರುವುದು ದುಃಖಕರ ಸಂಗತಿಯಾಗಿದೆ. ಕುಟುಂಬದ ನೋವಿನಲ್ಲಿ ತಾವು ಭಾಗಿಯಾಗಿದ್ದು ಆತನ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದರು.

ಮುಂದುವರೆದು ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಶಾಸಕರಾದ ಡಾ. ಭರತ್ ಶೆಟ್ಟಿಯವರು ನೀಡಿರುವ ಬೇಜವಬ್ದಾರಿ ಹೇಳಿಕೆಯಿಂದ ಮನೀಶ್ ಕುಟುಂಬದ ಸದಸ್ಯರು, ಸಮುದಾಯಕ್ಕೆ ನೋವು ತಂದಿದೆ.

ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕರಾದ ಭರತ್ ಶೆಟ್ಟಿಯವರ ಯಾವುದೇ ರೀತಿಯ ಸೂಕ್ತ ಮಾಹಿತಿಯನ್ನು ಪಡೆಯದೇ ತಮಗೆ ತೋಚಿದ ರೀತಿಯಲ್ಲಿ ಘಟನೆಯಲ್ಲಿ ಯಾರಿಗೂ ಕೂಡ ಪ್ರಾಣಹಾನಿ ಸಂಭವಿಸಿಲ್ಲ ಯಾರೂ ಕೂಡ ಗಾಬರಿಯಾಗುವುದು ಬೇಡ ಎಂಬ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿರುತ್ತಾರೆ. ಘಟನೆಯ ಕುರಿತು ಸೂಕ್ತ ವಿವರಗಳು ತಮ್ಮಲ್ಲಿ ಇಲ್ಲದೆ ಏಕಾ ಏಕಿ ಹೇಳಿಕೆ ನೀಡಿರುವುದು ಮೃತ ಯುವಕನ ಮನೆಯವರಿಗೆ ಸೇರಿದಂತೆ ಆತನ ಅಭಿಮಾನಿ ಬಳಗಕ್ಕೆ ನೋವು ತಂದಿದೆ ಇದಕ್ಕಾಗಿ ಶಾಸಕರು ಕೂಡಲೇ ಕ್ಷಮೆ ಯಾಚಿಸುವುದರೊಂದಿಗೆ ಮುಂದೆ ಇಂತಹ ಹೇಳಿಕೆ ನೀಡುವ ಮೊದಲು ಪೂರ್ವಾಪರ ತಿಳಿದು ಮಾತನಾಡಿದರೆ ಉತ್ತಮ.

ಸ್ಪೋಟದಲ್ಲಿ ಕಳವಾರು ಸಂತ ಜೋಸೇಫರ ಚರ್ಚ್ ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಹಾನಿಯಾಗಿದೆ. ಚರ್ಚಿನ ಹಂಚು, ಕಿಟಕಿ ಗಾಜುಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು ಯಾವುದೇ ರೀತಿಯ ಆದಾಯವಿಲ್ಲದ ಚರ್ಚು ಮತ್ತೆ ದುರಸ್ಥಿ ಮಾಡಲು ಲಕ್ಷಾಂತರ ಹಣ ವ್ಯಯಿಸುವ ಅಗತ್ಯವಿದೆ. ಘಟನೆಯ ಬಳಿಕ ಎಮ್ ಆರ್ ಪಿ ಎಲ್ ಆಡಳಿತವಾಗಲಿ ಸ್ಥಳೀಯ ಶಾಸಕರಾಗಲಿ ಜಿಲ್ಲಾಡಳಿತವಾಗಲಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಕೂಡ ನಡೆಸದೆ ಇರುವುದು ಖಂಡನೀಯ.

ಊರಿನ ಅಭಿವೃದ್ದಿಯ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆಗಳಿಗೆ ಅವಕಾಶ ನೀಡಿದ್ದು ಘಟಕಗಳಲ್ಲಿ ಸೂಕ್ತ ಸುರಕ್ಷಾ ವಿಧಾನಗಳನ್ನು ಅಳವಡಿಸಕೊಳ್ಳದಿರುವುದು ಕಂಪೆನಿ ಆಡಳಿತದ ಬೇಜವಾಬ್ದಾರಿಯಾಗಿದ್ದು ಭಾರೀ ಗಾತ್ರದ ಸ್ಪೋಟದಿಂದಾಗಿ ಚರ್ಚಿನ ಕಟ್ಟಡ ಸಂಪೂರ್ಣವಾಗಿ ಹಾನಿಯಾಗಿರುವ ಸಾಧ್ಯತೆ ಇದ್ದು ಕೂಡಲೇ ಚರ್ಚು ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಆಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿಗಳ ಮೂಲಕ ತನಿಖೆ ನಡೆಸಿ ಎಂಆರ್ಪಿಎಲ್ ಸಂಸ್ಥೆಯಿಂದಲೇ ನಷ್ಟ ಪರಿಹಾರ ಕೊಡಿಸುವಂತೆ ಹಾಗೂ ಮೃತ ಮನಿಶ್ ಕರ್ಕಡ ಅವರ ಮನೆಯವರಿಗೆ ಕೂಡ ಸೂಕ್ತ ಪರಿಹಾರ ನೀಡುವಂತೆ ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಿಎಸ್ ಐ ಅಮನ ಮೇಮೊರೀಯಲ್ ಚರ್ಚಿನ ಸಭಾಪಾಲಕರಾದ ವಂ|ಅಮೃತ್ ರಾಜ್ ಕೊಡೆ, ಸಿಎಸ್ ಐ ಸದರ್ನ್ ಡಯಾಸಿಸ್ ಇದರ ಕಾರ್ಯಕಾರಿ ಸಮಿತಿ ಸದಸ್ಯ ರಾಹುಲ್ ಕರ್ಕಡ, ಯೂತ್ ಫೆಲೋಶಿಪ್ ಕಾರ್ಯದರ್ಶಿ ಸುವೀನ್ ಪಾಲನ್, ಭಾರತೀಯ ಕ್ರೈಸ್ತ ಒಕ್ಕೂಟದ ಗ್ಲಾಡ್ಸನ್ ಕರ್ಕಡ ಹಾಗೂ ಪೀಟರ್ ದಾಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More like this
Related

ಮಣಿಪಾಲ| ನಕಲಿ ಕ್ಯೂಆರ್ ಕೋಡ್ ಮೂಲಕ  ₹12 ಲಕ್ಷ ವಂಚನೆ ಪ್ರಕರಣ: ಆರು ಮಂದಿ ಬಂಧನ

  ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ ಬ್ಯಾಟರಿ ಚಾಲಿತ ವಾಹನಗಳ ಪ್ರಯಾಣಿಕರ ಶುಲ್ಕವನ್ನು...

ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ಗುಜರಿ ಹೆಕ್ಕುವ ವ್ಯಕ್ತಿಯ ಬರ್ಬರ ಹತ್ಯೆ: ಆರೋಪಿಯ ಬಂಧನ

 ಉಡುಪಿ: ಮಲ್ಪೆಯ ಬಾಬುತೋಟ ಧಕ್ಕೆಯ ಬಳಿಯ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬರನ್ನು ಕುತ್ತಿಗೆಗೆ...

ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಆರೋಗ್ಯದಲ್ಲಿ ಚೇತರಿಕೆ

ವಿಮಾನದಲ್ಲಿ ನಡೆದ ದಾಳಿಯ ವೇಳೆ ಪ್ರಯಾಣಿಕರು, ಸಿಬ್ಬಂದಿಯ ಜೀವ ಉಳಿಸಲು ಧೈರ್ಯದಿಂದ...

Copying is disabled on Udupi Digital News.