ಉಡುಪಿ: ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಗೆ ವಿವಿಧ ಕ್ಷೇತ್ರಗಳ ಮುಖಂಡರು ಮತ್ತು ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಪರಿಶಿಷ್ಟ ಜಾತಿ ವಿಭಾಗದಿಂದ ಸುನೀತಾ ಹೆಬ್ರಿ, ಪರಮೇಶ್ವರ ತೆಂಕಬೆಟ್ಟು (ಬ್ರಹ್ಮಾವರ) ಹಾಗೂ ಕೆ.ಸಿ. ರಾಜು (ಬೆಟ್ಟಿನ ಮನೆ, ವಕ್ವಾಡಿ, ಕುಂದಾಪುರ) ಅವರನ್ನು ನೇಮಿಸಲಾಗಿದೆ. ಪರಿಶಿಷ್ಟ ಪಂಗಡ ವಿಭಾಗದಿಂದ ಬಬಿತ ಬೊಮ್ಮರಬೆಟ್ಟು (ಹಿರಿಯಡ್ಕ) ಮತ್ತು ವಿಶ್ವನಾಥ ಬೆಳ್ಳಂಪಳ್ಳಿ (ಉಡುಪಿ) ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಇತರ ಸದಸ್ಯರಾಗಿ ಜೆರಾಲ್ಡ್ ಪಿಂಟೊ (ಕಲ್ಯಾಣಪುರ), ಚಂದ್ರಮೋಹನ ಪೂಜಾರಿ (ಪಾಂಡೇಶ್ವರ, ಸಾಸ್ತಾನ) ಹಾಗೂ ಮಂಜುನಾಥ್ ಆರ್. (ಅರಾಟೆ, ಕುಂದಾಪುರ) ಅವರನ್ನು ನೇಮಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಪತ್ರಾಂಕಿತ ಗ್ರೂಪ್-ಎ ಅಧಿಕಾರಿಗಳಾದ ಶೈಲಜಾ ಎಂ.ಎನ್. (ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ), ಹಾಲಪ್ಪ ಆರ್. ಲಮಾಣಿ (ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ) ಮತ್ತು ಚಂದ್ರಶೇಖರ ನಾಯ್ಕ್ (ಉಪನಿರ್ದೇಶಕರು, ಕೃಷಿ ಇಲಾಖೆ) ಸಮಿತಿಯ ಸದಸ್ಯರಾಗಿರುತ್ತಾರೆ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಸರ್ಕಾರಿ ಅಭಿಯೋಜಕರು, ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ಹಾಗೂ ಐಟಿಡಿಪಿ ಉಡುಪಿ ಯೋಜನಾ ಸಮನ್ವಯಾಧಿಕಾರಿಗಳು ಸಮಿತಿಯ ಆಹ್ವಾನಿತ ಸದಸ್ಯರಾಗಿರುತ್ತಾರೆ.
ಸಮಿತಿಯ ಪ್ರಮುಖ ಉದ್ದೇಶಗಳು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವುದು ಸಮಿತಿಯ ಪ್ರಮುಖ ಉದ್ದೇಶಗಳಾಗಿವೆ.
ಕಾಯ್ದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಯ ಪ್ರಗತಿಯನ್ನು ಪರಿಶೀಲಿಸುವುದು, ತನಿಖೆಯ ಗುಣಮಟ್ಟ ಮತ್ತು ಶಿಕ್ಷೆಯ ಪ್ರಮಾಣ ಸುಧಾರಿಸಲು ಕ್ರಮ ಕೈಗೊಳ್ಳುವುದು ಹಾಗೂ ನ್ಯಾಯಾಲಯಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಮಂಡಿಸುವುದಕ್ಕೆ ವಿಶೇಷ ಗಮನ ನೀಡಲಾಗುತ್ತದೆ.
ಇದಲ್ಲದೆ, ದೌರ್ಜನ್ಯ ಪೀಡಿತ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸ್ವೀಕರಿಸಲಾದ ವರದಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನೂ ಸಮಿತಿ ನಿರ್ವಹಿಸಲಿದೆ.
ಸಮಿತಿಯ ಸದಸ್ಯರು ಕಾಲಕಾಲಕ್ಕೆ ನಡೆಯುವ ಜಿಲ್ಲಾ ಮಟ್ಟದ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ದೌರ್ಜನ್ಯ ತಡೆ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆ ಮತ್ತು ಸಹಕಾರ ನೀಡುವಂತೆ ಸೂಚಿಸಲಾಗಿದೆ.




