ವಿಮಾನದಲ್ಲಿ ನಡೆದ ದಾಳಿಯ ವೇಳೆ ಪ್ರಯಾಣಿಕರು, ಸಿಬ್ಬಂದಿಯ ಜೀವ ಉಳಿಸಲು ಧೈರ್ಯದಿಂದ ಹೋರಾಡಿದ್ದ ಪೈಲಟ್‌ಗೆ ಉತ್ತಮ ಚಿಕಿತ್ಸೆ
ಅಬುಧಾಬಿ: ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಉತ್ತಮ ವೈದ್ಯಕೀಯ ಆರೈಕೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.
ಕ್ಯಾಪ್ಟನ್ ಮಚ್ಚರ್ ಅವರ ಕುಟುಂಬ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಪೈಲಟ್‌ಗೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಯುಎಇ ಸರ್ಕಾರಕ್ಕೂ ಕೃತಜ್ಞತೆ ಸಲ್ಲಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ರಾಯಭಾರ ಕಚೇರಿ, “ಭಾರತದ ಧೈರ್ಯಶಾಲಿ ಕ್ಯಾಪ್ಟನ್ ಸ್ಮಿತ್ ಅವರು ಅತ್ಯುತ್ತಮ ವೈದ್ಯಕೀಯ ಆರೈಕೆಯಲ್ಲಿದ್ದು, ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲು ಅವರ ಕುಟುಂಬ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ. ಆರೈಕೆ ಒದಗಿಸುತ್ತಿರುವ ಯುಎಇ ಸರ್ಕಾರಕ್ಕೆ ಧನ್ಯವಾದಗಳು. ಅವರ ಉತ್ತಮ ಆರೋಗ್ಯಕ್ಕಾಗಿ ಹಾರೈಸುವ ಎಲ್ಲರೊಂದಿಗೆ ನಾವೂ ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದೆ.
ಬುಧವಾರ ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಮಧ್ಯಾಕಾಶದಲ್ಲೇ ನಡೆದ ದಾಳಿಯನ್ನು ತಡೆಯಲು ಮುಂದಾದ ಸಂದರ್ಭದಲ್ಲಿ ಕ್ಯಾಪ್ಟನ್ ಮಚ್ಚರ್ ಗಾಯಗೊಂಡಿದ್ದರು. ಘಟನೆಯ ವೇಳೆ ಮತ್ತೊಬ್ಬ ಪೈಲಟ್ ಚಾಕುವಿನಿಂದ ಕ್ಯಾಪ್ಟನ್ ಮಚ್ಚರ್ ಅವರಿಗೆ ಇರಿದಿದ್ದು, ವಿಮಾನವು ನಿಯಂತ್ರಣ ತಪ್ಪಿ ಕೆಳಮುಖವಾಗಿ ಕುಸಿಯಲಾರಂಭಿಸಿತ್ತು ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಧೈರ್ಯದಿಂದ ಪ್ರತಿರೋಧ ತೋರಿದ ಭಾರತೀಯ ಪೈಲಟ್, ಕಾಕ್‌ಪಿಟ್‌ನ ಬಾಗಿಲು ತೆರೆದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪ್ರಯಾಣಿಕರು ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ಹಿಡಿದು ನಿಯಂತ್ರಣಕ್ಕೆ ತೆಗೆದುಕೊಂಡರು. ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚರ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸ್ಥಿರಗೊಳಿಸಿದ ಬಳಿಕ, ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.
ಈ ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕ್ಯಾಪ್ಟನ್ ಮಚ್ಚರ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿ, ಅವರ ಧೈರ್ಯ, ಸಮಯಪ್ರಜ್ಞೆ ಹಾಗೂ ಸಂಕಷ್ಟದ ಸಂದರ್ಭದಲ್ಲಿನ ಸಂಯಮವನ್ನು ಶ್ಲಾಘಿಸಿದರು. ಮಧ್ಯಾಕಾಶದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯ ಜೀವ ಉಳಿಸಲು ಅವರು ತೋರಿದ ಸಾಹಸವನ್ನು ಪ್ರಧಾನಿ ಪ್ರಶಂಸಿಸಿದರು.
ಸಂಭಾಷಣೆಯ ಆರಂಭದಲ್ಲಿ ಕ್ಯಾಪ್ಟನ್ ಮಚ್ಚರ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರಧಾನಿ ಮೋದಿ, ಅವರು ಶೀಘ್ರ ಗುಣಮುಖರಾಗಲೆಂದು ಇಡೀ ದೇಶ ಪ್ರಾರ್ಥಿಸುತ್ತಿದೆ ಎಂದು ಹೇಳಿದರು.
“ಇಡೀ ದೇಶ ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ. ನಿಮ್ಮ ಆರೋಗ್ಯಕ್ಕಾಗಿ ಮಹಾಮೃತ್ಯುಂಜಯ ಜಪ ನಡೆಯುತ್ತಿದೆ. ನಿಮ್ಮ ಧೈರ್ಯ, ಸಮಯಪ್ರಜ್ಞೆ ಮತ್ತು ಸಂಯಮದಿಂದ ಅನೇಕ ಜೀವಗಳು ಉಳಿದಿವೆ. ಭಾರತೀಯರು ಇತರರ ಜೀವ ತೆಗೆಯುವವರಲ್ಲ, ಬದಲಾಗಿ ಇತರರ ಜೀವ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಡುವವರು ಎಂದು ದೇಶ ಹೆಮ್ಮೆಯಿಂದ ಹೇಳಿಕೊಳ್ಳಬಹುದು” ಎಂದು ಪ್ರಧಾನಿ ಮೋದಿ ಹೇಳಿದರು. ಇದಕ್ಕೆ ಕ್ಯಾಪ್ಟನ್ ಮಚ್ಚರ್ ಅವರು ತಲೆಯಾಡಿಸಿ, “ಹೌದು, ಸರ್” ಎಂದು ಪ್ರತಿಕ್ರಿಯಿಸಿದರು.
ಮಧ್ಯಾಕಾಶದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ತೋರಿದ ಸಾಹಸ ಹಾಗೂ ನೂರಾರು ಜನರ ಜೀವ ಉಳಿಸಲು ನೆರವಾದ ಕಾರ್ಯಕ್ಕಾಗಿ ಕ್ಯಾಪ್ಟನ್ ಮಚ್ಚರ್ ಅವರಿಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ನಾಯಕರು ಹಾಗೂ ಸಾರ್ವಜನಿಕರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.




