ಉಡುಪಿ: ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವಿಕೋಪಕ್ಕೆ ತಿರುಗಿ, ಸ್ಟೀಲ್ ಪೈಪ್ನಿಂದ ತಲೆಗೆ ಹಲ್ಲೆ ನಡೆಸಿದ ಪರಿಣಾಮ ರೌಡಿ ಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಬೈಕಾಡಿ ಗ್ರಾಮದ ಪಡುಬೈಕಾಡಿ ನಿವಾಸಿಗಳಾದ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾಗಿ ಮೃತಪಟ್ಟವರು ಉಡುಪಿ ಕಲ್ಯಾಣಪುರದ ಸಂತೆಕಟ್ಟೆ ನಿವಾಸಿ ಸುಜಿತ್ ಪಿಂಟೊ. ಘಟನೆಯಲ್ಲಿ ಮಧ್ಯಪ್ರವೇಶಿಸಲು ಬಂದ ಬೈಕಾಡಿ ಗ್ರಾಮದ ನಿವಾಸಿ ಜೀವನ್ ಪೂಜಾರಿ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 27ರಂದು ರಾತ್ರಿ 7.30ರಿಂದ 8.30ರ ನಡುವಿನ ಅವಧಿಯಲ್ಲಿ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ಅವರು ಸುಜಿತ್ ಪಿಂಟೊ ಹಾಗೂ ಜೀವನ್ ಪೂಜಾರಿಯನ್ನು ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ಗೆ ಕರೆಸಿಕೊಂಡಿದ್ದರು. ಅಲ್ಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಈ ವೇಳೆ ಪರಸ್ಪರ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಗಲಾಟೆಯ ಸಂದರ್ಭದಲ್ಲಿ ಪ್ರದೀಪ್ ಪೂಜಾರಿ ಸುಜಿತ್ ಪಿಂಟೊ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಪ್ರಮೋದ್ ಪೂಜಾರಿ ತನ್ನ ಪ್ಯಾಂಟ್ನ ಹಿಂಭಾಗದಲ್ಲಿ ಇಟ್ಟುಕೊಂಡಿದ್ದ ಸ್ಟೀಲ್ ಪೈಪ್ನಿಂದ ಅವರ ತಲೆಗೆ ಹಲವು ಬಾರಿ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ಸುಜಿತ್ ಪಿಂಟೊ ಅವರ ತಲೆ ಮತ್ತು ಮುಖಕ್ಕೆ ಗಂಭೀರ ರಕ್ತಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಹಲ್ಲೆಯನ್ನು ತಡೆಯಲು ಬಂದ ಜೀವನ್ ಪೂಜಾರಿ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಪ್ರತ್ಯಕ್ಷ ಸಾಕ್ಷಿ ಜೀವನ್ ಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಆರೋಪಿಗಳ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆ ಇಲ್ಲ. ಹಣಕಾಸು ಅಥವಾ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಸುಜಿತ್ ಪಿಂಟೊ ಅವರು ಅಪರಾಧ ಹಿನ್ನೆಲೆ ಹೊಂದಿದ್ದು, ಮಲ್ಪೆ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದರು ಎನ್ನಲಾಗಿದೆ. ಅವರ ವಿರುದ್ಧ ಉಡುಪಿ ನಗರ, ಮಲ್ಪೆ, ಹಿರಿಯಡ್ಕ ಮತ್ತು ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.




