ದುಬೈ: ವಿಮಾನದ ಕಾಕ್‌ಪಿಟ್‌ನಲ್ಲಿ ಉಂಟಾದ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಧೈರ್ಯ ಮತ್ತು ವೃತ್ತಿಪರತೆ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ಫ್ಲೈದುಬೈ ವಿಮಾನ ಸಿಬ್ಬಂದಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೌರವಿಸಿದೆ. ಸೆಪ್ಟೆಂಬರ್ 30ರಂದು ನಡೆದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಸಿಬ್ಬಂದಿ ಮತ್ತು ಪ್ರಯಾಣಿಕರು ಮಧ್ಯಪ್ರವೇಶಿಸಿ, ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಲು ನೆರವಾಗಿದ್ದರು.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಘಟನೆಯಲ್ಲಿ ಭಾಗಿಯಾಗಿದ್ದ ವಿಮಾನ ಸಿಬ್ಬಂದಿಗೆ ‘ಆರ್ಡರ್ ಆಫ್ ಜಾಯೆದ್ II’ ಪ್ರಶಸ್ತಿಯ ಪ್ರಥಮ ದರ್ಜೆ ಗೌರವ ಪ್ರದಾನ ಮಾಡಿದರು. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಹಾಗೂ ವಿಮಾನದ ಸುರಕ್ಷತೆಯನ್ನು ಕಾಪಾಡಲು ಅವರು ತೋರಿದ ಧೈರ್ಯ ಮತ್ತು ಬದ್ಧತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಭಾರತ, ಯುಎಇ, ಇಸ್ರೇಲ್ ಮತ್ತು ಅಮೆರಿಕದ ನಾಯಕರಿಂದ ಕ್ಯಾಪ್ಟನ್ ಮಚ್ಚರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೇಲ್ ಕೂಡ ಅವರ ಧೈರ್ಯವನ್ನು ಗುರುತಿಸಿ ನಾಗರಿಕ ಧೈರ್ಯ ಪ್ರಶಸ್ತಿ ಘೋಷಿಸಿದ್ದು, ಗಾಯಗಳಿಂದ ಚೇತರಿಸಿಕೊಂಡ ಬಳಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ದುಬೈ ಯುವರಾಜ, ಯುಎಇ ಉಪ ಪ್ರಧಾನಮಂತ್ರಿ, ರಕ್ಷಣಾ ಸಚಿವ ಹಾಗೂ ದುಬೈ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಈ ಗೌರವ ಪ್ರದಾನ ಮಾಡಿದರು. ಯುಎಇ ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಸಮ್ಮುಖದಲ್ಲಿ ಮಂಗಳವಾರ ಸಿಬ್ಬಂದಿಯನ್ನು ಭೇಟಿಯಾಗಿ, ತುರ್ತು ಪರಿಸ್ಥಿತಿಯಲ್ಲಿ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.
ಕಠಿಣ ಪರಿಸ್ಥಿತಿಯಲ್ಲಿಯೂ ಪ್ರಯಾಣಿಕರ ಸುರಕ್ಷತೆ ಮತ್ತು ವಿಮಾನದ ಭದ್ರತೆಯನ್ನು ಖಚಿತಪಡಿಸುವಲ್ಲಿ ಸಿಬ್ಬಂದಿ ತೋರಿದ ಧೈರ್ಯ, ವೃತ್ತಿಪರತೆ ಹಾಗೂ ಬದ್ಧತೆಯನ್ನು ಯುಎಇ ನಾಯಕತ್ವ ಪ್ರಶಂಸಿಸಿತು. ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವುದು ದೇಶದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿತು. ಗೌರವ ಸ್ವೀಕರಿಸಿದ ಸಿಬ್ಬಂದಿ ಯುಎಇ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿ, ಈ ಮನ್ನಣೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು, ಅಕ್ಟೋಬರ್ 3ರಂದು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಪ್ಟನ್ ಮಚ್ಚರ್ ಅವರನ್ನು ಶೇಖ್ ಹಮ್ದಾನ್ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ತುರ್ತು ಪರಿಸ್ಥಿತಿಯಲ್ಲಿ ಪ್ರದರ್ಶಿಸಿದ ಧೈರ್ಯ, ಸಂಯಮ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಶ್ಲಾಘಿಸಿದ್ದರು. ಮಚ್ಚರ್ ಅವರು ಮಾನವ ಜೀವದ ಬಗ್ಗೆ ಅಪಾರ ಕಾಳಜಿ ತೋರುವ ಮೂಲಕ ಇತರರ ಸುರಕ್ಷತೆಗಾಗಿ ಧೈರ್ಯದಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಯುವರಾಜ ಮೆಚ್ಚುಗೆ ವ್ಯಕ್ತಪಡಿಸಿದ್ದರು.
“ನಮ್ಮ ಪರವಾಗಿ ಮತ್ತು ದೇಶದ ನಾಯಕತ್ವದ ಪರವಾಗಿ ಅವರಿಗೆ ಸಂಪೂರ್ಣ ಮೆಚ್ಚುಗೆ ಮತ್ತು ಪ್ರಶಂಸೆ ಸಲ್ಲಿಸುತ್ತೇವೆ” ಎಂದು ಶೇಖ್ ಹಮ್ದಾನ್ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದರು. ಭಾರತೀಯ ಕ್ಯಾಪ್ಟನ್ ಯುಎಇ ತಂಡದ ಭಾಗವಾಗಿರುವುದಕ್ಕೆ ದೇಶ ಹೆಮ್ಮೆಪಡುತ್ತದೆ ಎಂದ ಅವರು, ಯುಎಇಯ ಮೌಲ್ಯಗಳು ಕರುಣೆ, ಶಾಂತಿ ಮತ್ತು ಮಾನವ ಜೀವದ ಗೌರವವನ್ನು ಆಧರಿಸಿವೆ ಎಂದು ಹೇಳಿದ್ದಾರೆ.
ಕಾಕ್‌ಪಿಟ್‌ನಲ್ಲಿನ ಘಟನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ನೆರವಾದ ಕ್ಯಾಪ್ಟನ್ ಮಚ್ಚರ್, ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಯುಎಇಯ ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರವೂ ಶ್ಲಾಘಿಸಿತ್ತು.




