ಉಡುಪಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿ ಕಳುವಾದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಏ.18 ರಂದು ರಾತ್ರಿ 7:45ರ ಸುಮಾರಿಗೆ ಪಡುಬಿದ್ರಿ ಶ್ರೀ ನಾರಾಯಣಗುರು ಮಂದಿರದ ಬಳಿ ಮುಲ್ಕಿ ಕಾರ್ನಾಡಿನ ನಿವಾಸಿ ವಾಸುದೇವ ಶೆಟ್ಟಿಗಾರ್ ಅವರು ತಮ್ಮನಿಗೆ ಸೇರಿದ ಕೆಎ19ಇಹೆಚ್6946 ನಂಬರಿನ ಯಮಹಾ ಎಫ್ಝಡ್ ಮೋಟಾರ್ ಸೈಕಲ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸಮೀಪದ ಕ್ಯಾಂಟೀನ್ಗೆ ತೆರಳಿದ್ದರು. ಬಳಿಕ ವಾಪಸ್ ಬಂದು ನೋಡಿದಾಗ ಬೈಕ್ ಕಾಣೆಯಾಗಿದ್ದು, ಕಳವು ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಮಾರ್ಗದರ್ಶನದಲ್ಲಿ ಪಡುಬಿದ್ರಿ ಠಾಣಾ ಪಿಎಸ್ಐ ಸಕ್ತಿವೇಲು ಇ. ಮತ್ತು ಅನಿಲ್ ಕುಮಾರ್ ಟಿ. ನಾಯಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದ ಮಂಜುನಾಥ ಫಕೀರಪ್ಪ ವಾಲಿಕಾರ ಎಂಬಾತನನ್ನು ವಶಕ್ಕೆ ಪಡೆದು, ಆತನಿಂದ ರೂ.20,000 ಮೌಲ್ಯದ ಕಳುವಾದ ಯಮಹಾ ಎಫ್ಝಡ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಎಎಸ್ಐ ರಾಜೇಶ್ ಪಿ., ಹೆಚ್ಸಿ ಕೃಷ್ಣಪ್ರಸಾದ್, ಅಶ್ವಿನ್ ಕುಮಾರ್ ಹಾಗೂ ಪಿಸಿ ಸಂದೇಶ್ ಭಂಡಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




