ಉಡುಪಿ: ಉಚ್ಚಿಲ ದಸರಾ ಮಹೋತ್ಸವದ ಬೃಹತ್ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಹಾಗೂ ನಿರ್ಬಂಧ ವಿಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ-2026ರ ಸಮಾರೋಪದ ಅಂಗವಾಗಿ ಅಕ್ಟೋಬರ್ 21ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸ್ ಅಧೀಕ್ಷಕರ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಉಡುಪಿ–ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಘನ ವಾಹನಗಳಿಗೆ ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ನಿರ್ಬಂಧ ವಿಧಿಸಲಾಗಿದೆ. ಈ ವಾಹನಗಳು ಪರ್ಯಾಯ ಮಾರ್ಗವಾಗಿ ಕಟಪಾಡಿ–ಶಿರ್ವ–ಬೆಳ್ಳಣ್–ಪಡುಬಿದ್ರಿ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
ಉಡುಪಿ ಕಡೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಕಟಪಾಡಿ–ಶಿರ್ವ–ಬೆಳ್ಳಣ್–ಮುಂಡೂರು ಮಾರ್ಗವಾಗಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ.
ಟ್ರಕ್, ಲಾರಿ, ಟ್ಯಾಂಕರ್ ಸೇರಿದಂತೆ ಘನ ವಾಹನಗಳು ರಾತ್ರಿ 9 ಗಂಟೆಯವರೆಗೆ ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿರುವ ಟ್ರಕ್ ಬೇಗಳಲ್ಲಿ ನಿಲುಗಡೆ ಮಾಡಬೇಕು. ಬಳಿಕ ತಮ್ಮ ಪ್ರಯಾಣವನ್ನು ಮುಂದುವರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ರಾತ್ರಿ ಪ್ರಯಾಣಿಕರ ಬಸ್ಗಳು ರಾತ್ರಿ 9 ಗಂಟೆಯ ನಂತರ ಸಂಚಾರ ಮುಂದುವರಿಸುವಂತೆ ಸೂಚಿಸಲಾಗಿದೆ.
ಈ ಸಂಚಾರ ನಿಯಂತ್ರಣ ಕ್ರಮಗಳು ವಿವಿಐಪಿ ವಾಹನಗಳು, ಸರ್ಕಾರಿ ವಾಹನಗಳು ಹಾಗೂ ತುರ್ತು ಸೇವಾ ವಾಹನಗಳಿಗೆ ಅನ್ವಯಿಸುವುದಿಲ್ಲ.
ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989ರ ನಿಯಮ 221(5)(ಎ)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ. ಅವರು ಅಕ್ಟೋಬರ್ 16ರಂದು ಈ ಆದೇಶ ಹೊರಡಿಸಿದ್ದಾರೆ.




