Tuesday, September 15, 2026

ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಉಡುಪಿ ಜಿಲ್ಲಾ ಬಿಜೆಪಿ ಎಸ್ ಟಿ ಮೋರ್ಚಾ ಆಗ್ರಹ

ಉಡುಪಿ: ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಹಾಗೂ ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ನಿಗಮದ ಮೂಲಕ ಅನುದಾನ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ಉಡುಪಿ ಜಿಲ್ಲಾ ಘಟಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದೆ.

ಸುಮಾರು ಎರಡು ವರ್ಷಗಳ ಹಿಂದೆ ತೆಲಂಗಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಸುಮಾರು ₹187 ಕೋಟಿ ಹಣವನ್ನು ಅಕ್ರಮವಾಗಿ ವಿವಿಧ ಖಾಸಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಆರೋಪಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಿಗಮದಲ್ಲಿ ಹಗರಣ ನಡೆದಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು ಎಂದು ಸಂಘಟನೆ ತಿಳಿಸಿದೆ. ಅಲ್ಲದೆ, ಬಿ. ನಾಗೇಂದ್ರ ವಿರುದ್ಧ ಸಿಬಿಐ ಮೂರು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದ್ದು, ಜಾರಿ ನಿರ್ದೇಶನಾಲಯವೂ ಚಾರ್ಜ್ಶೀಟ್ ಸಲ್ಲಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಬಿ. ನಾಗೇಂದ್ರ ಅವರು ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮಾಡಿರುವ ಅನ್ಯಾಯವಾಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಆರೋಪಿಸಿದೆ.

ಕಳೆದ ಮೂರು ವರ್ಷಗಳಿಂದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ನಿಗಮದ ಮೂಲಕ ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಕೂಡಲೇ ಜಿಲ್ಲೆಗೆ ನಿಗಮದ ಮೂಲಕ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಹಾಗೂ ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಸೂಕ್ತ ಅನುದಾನ ಒದಗಿಸಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ ನಾಯಕ್, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಸತ್ಯಾನಂದ ನಾಯಕ್,ಜಿಲ್ಲಾ ಕಾರ್ಯದರ್ಶಿ ಉಮೇಶ್ ಎ.ನಾಯ್ಕ್ ಚೇರ್ಕಾಡಿ, ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬುಜಂಗ ನಾಯ್ಕ್ ಮಣಿಪಾಲ್,ಉಪಾಧ್ಯಕ್ಷ ರಮೇಶ್ ನಾಯ್ಕ್ ಕೊಡ್ಲಾಡಿ,ಎಸ್ಟಿ ಮೋರ್ಚಾದ ಪ್ರದಾನ ಕಾರ್ಯದರ್ಶಿ ಉಮೇಶ್ ನಾಯ್ಕ್ ನೂಜಿನಬೈಲು ಮತ್ತು ಸುಭಾಸ್ ನಾಯ್ಕ್ ಪೆರ್ಡೂರ್,ನಗರ ಎಸ್ಟಿ ಮೋರ್ಚ ಅಧ್ಯಕ್ಷ ಸುಮಲತ ನಾಯ್ಕ್, ಉಪಾದ್ಯಕ್ಷರು ನವೀನ್ ನಾಯ್ಕ್,ಪ್ರದಾನ ಕಾರ್ಯದರ್ಶಿ ಸುಗುಣ ನಾಯ್ಕ್ ಇಂದ್ರಾಳಿ ಹಾಗೂ ಇತರರು ಉಪಸ್ಥಿತರಿದ್ದರು.

More like this
Related

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.