ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಜಿಲ್ಲೆಯಲ್ಲಿ ಮಂಗಳವಾರ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪೇಶಾವರಕ್ಕೆ ತೆರಳುತ್ತಿದ್ದ ರೆಹಮಾನ್ ಬಾಬಾ ಎಕ್ಸ್ಪ್ರೆಸ್ ರೈಲು, ಮುಲ್ತಾನ್ ಜಿಲ್ಲೆಯ ಶೇರ್ ಶಾ ರೈಲು ನಿಲ್ದಾಣದ ಸಮೀಪ ಹಳಿ ತಪ್ಪಿದೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿರುವುದನ್ನು ಪಾಕಿಸ್ತಾನದ ರೈಲ್ವೆ ಸಚಿವ ಹನೀಫ್ ಅಬ್ಬಾಸಿ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಕುರಿತು ತನಿಖೆ ನಡೆಸಲು ಫೆಡರಲ್ ಗವರ್ನಮೆಂಟ್ ಇನ್ಸ್ಪೆಕ್ಟರ್ ಆಫ್ ರೈಲ್ವೇಸ್ (FGIR) ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ಡಾನ್’ ವರದಿ ಮಾಡಿದೆ.
ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ರೈಲು
ರೈಲಿನ ಲೋಕೊ ಪೈಲಟ್ ರಿಜ್ವಾನ್ ಅಬ್ಬಾಸ್ ಅವರ ಪ್ರಕಾರ, ರೈಲು ಗಂಟೆಗೆ ಸುಮಾರು 100 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು. ಶೇರ್ ಶಾ ನಿಲ್ದಾಣದ ಪ್ರದೇಶವನ್ನು ದಾಟುತ್ತಿದ್ದಾಗ ರೈಲಿಗೆ ಏಕಾಏಕಿ ಜೋರಾದ ಒತ್ತಡ ಉಂಟಾದ ಅನುಭವವಾಗಿದೆ.
ತಕ್ಷಣವೇ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ.
“ಲೋಕೊಮೋಟಿವ್ನಿಂದ ಕೆಳಗಿಳಿದು ಹಿಂದಕ್ಕೆ ನೋಡಿದಾಗ, ಪ್ರಯಾಣಿಕರ ಬೋಗಿಗಳು ಹಳಿ ತಪ್ಪಿ ಹಳಿಗಳ ಪಕ್ಕದಲ್ಲಿ ಬಿದ್ದಿರುವುದು ಕಂಡಿತು. ಆ ದೃಶ್ಯ ಭಯಾನಕವಾಗಿತ್ತು” ಎಂದು ಅಬ್ಬಾಸ್ ಹೇಳಿರುವುದಾಗಿ ‘ಡಾನ್’ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ರೈಲು ಅಪಘಾತಗಳು
ಪಾಕಿಸ್ತಾನದಲ್ಲಿ ಕಳೆದ ಒಂದು ವರ್ಷದಿಂದ ಹಲವು ರೈಲು ಹಳಿ ತಪ್ಪುವ ಘಟನೆಗಳು ವರದಿಯಾಗಿದ್ದು, ರೈಲುಗಳು ಮತ್ತು ಹಳಿಗಳ ನಿರ್ವಹಣೆಯಲ್ಲಿನ ಲೋಪಗಳ ಕುರಿತು ಆತಂಕ ಹೆಚ್ಚಾಗಿದೆ.
ಅಕ್ಟೋಬರ್ 1ರಂದು ಶಾಲಿಮಾರ್ ಎಕ್ಸ್ಪ್ರೆಸ್ ಮತ್ತು ಪಾಕಿಸ್ತಾನ್ ಎಕ್ಸ್ಪ್ರೆಸ್ ಎಂಬ ಎರಡು ಪ್ರಯಾಣಿಕ ರೈಲುಗಳು ಹಳಿ ತಪ್ಪಿದರೂ, ಭಾರೀ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದವು.
ಆಗಸ್ಟ್ನಲ್ಲಿ ಪೇಶಾವರದಿಂದ ಕರಾಚಿಗೆ ತೆರಳುತ್ತಿದ್ದ ಅವಾಮ್ ಎಕ್ಸ್ಪ್ರೆಸ್ನ ನಾಲ್ಕು ಬೋಗಿಗಳು ಲೋಧ್ರಾನ್ ರೈಲು ನಿಲ್ದಾಣದ ಸಮೀಪ ಹಳಿ ತಪ್ಪಿದ್ದವು. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಕನಿಷ್ಠ 24 ಪ್ರಯಾಣಿಕರು ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.
ಇನ್ನು ಜುಲೈನಲ್ಲಿ ಸಿಂಧ್ ಪ್ರಾಂತ್ಯದ ಶಿಕಾರ್ಪುರ ಸಮೀಪ ರೈಲು ಹಳಿಯಲ್ಲಿ ಸ್ಫೋಟ ಸಂಭವಿಸಿದ ಬಳಿಕ ಜಾಫರ್ ಎಕ್ಸ್ಪ್ರೆಸ್ನ ಮೂರು ಬೋಗಿಗಳು ಹಳಿ ತಪ್ಪಿದ್ದವು. ಘಟನೆಯಲ್ಲಿ ಒಬ್ಬ ಪ್ರಯಾಣಿಕ ಗಾಯಗೊಂಡಿದ್ದು, ಆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.




