ಗುವಾಹಟಿ: ಗುವಾಹಟಿಯಲ್ಲಿ 9ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ತಾಯಿಗೆ ಚಾಕುವಿನಿಂದ ಇರಿದು, ಅನಂತರ ಬಹುಮಹಡಿ ಕಟ್ಟಡದ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂನ ಗುವಾಹಟಿಯ ಖಾಸಗಿ ಶಾಲೆಯೊಂದರ ಈ ವಿದ್ಯಾರ್ಥಿ ಶುಕ್ರವಾರ ರಾತ್ರಿ ಬಮುನಿಮೈದಾಂ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ತಾಯಿಗೆ ಹರಿತವಾದ ಆಯುಧದಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕೃತ್ಯದ ನಂತರ ಮನೆಯಿಂದ ತೆರಳಿದ ಬಾಲಕ ತನ್ನ ಶಾಲೆಯ ವ್ಯಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ತಾಯಿಯ ಮೇಲೆ ದಾಳಿ ಮಾಡಿರುವ ಕುರಿತ ವಿವರಗಳನ್ನು ಪೋಸ್ಟ್ ಮಾಡಿದ್ದಾನೆ. ಅಲ್ಲದೆ, ತನ್ನ ಮನೆಯನ್ನು ಪತ್ತೆ ಹಚ್ಚಿ, ತಾಯಿಗೆ ನೆರವಾಗುವಂತೆ ಸಹಪಾಠಿಗಳಲ್ಲಿ ವಿನಂತಿಸಿದ್ದಾನೆ. ಆನಂತರ ನಗರದ ಎಬಿಸಿ ಪ್ರದೇಶಕ್ಕೆ ತೆರಳಿದ್ದಾನೆ. ಅಲ್ಲಿನ ಕಟ್ಟಡವೊಂದರ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ದಾಳಿಗೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.




