ಕೊಟ್ಟಾಯಂ: ತನಗೆ ಐಫೋನ್ ಮತ್ತು ಸ್ನೇಹಿತನಿಗೆ ಮೋಟಾರ್ ಸೈಕಲ್ ಖರೀದಿಸಲು ಹಣ ಹೊಂದಿಸುವ ಉದ್ದೇಶದಿಂದ 13 ವರ್ಷದ ಬಾಲಕಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಸೇರಿ 67 ವರ್ಷದ ಸ್ವಂತ ತಾತನನ್ನೇ ಕೊಲೆ ಮಾಡಿದ್ದಾಳೆ.
ಕೊಟ್ಟಾಯಂನ ಕರುವಟ್ಟಾದಲ್ಲಿ ನಡೆದ ಈ ಘಟನೆ ಕುರಿತು ಪೊಲೀಸರು ಬಾಲ ನ್ಯಾಯ ಮಂಡಳಿ (ಜೆಜೆಬಿ) ಮುಂದೆ 740 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಅವರಲ್ಲಿ ಇಬ್ಬರಿಗೆ 17 ವರ್ಷ, ಒಬ್ಬನಿಗೆ 16 ವರ್ಷ ಮತ್ತು ಬಾಲಕಿಗೆ 13 ವರ್ಷ ವಯಸ್ಸು. ನಾಲ್ವರೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದರಿಂದ ಪೊಲೀಸರು ಇದನ್ನು ಒಂದು ವಿರಳ ಪ್ರಕರಣ ಎಂದು ಬಣ್ಣಿಸಿದ್ದಾರೆ.
ಪೊಲೀಸರ ಪ್ರಕಾರ, ಆಗಸ್ಟ್ 15ರ ರಾತ್ರಿ ಮೂವರು ಬಾಲಕರು ಬಾತ್‌ರೂಮ್‌ನ ಹೆಂಚನ್ನು ಸರಿಸಿ ವೃದ್ಧನ ಮನೆ ಪ್ರವೇಶಿಸಿದ್ದಾರೆ. ವೃದ್ಧನನ್ನು ಪ್ರಜ್ಞಾಹೀನಗೊಳಿಸಲು ಆತನ ಬಾಯಿಗೆ ಬಟ್ಟೆ ತುರುಕಿದ್ದಾರೆ. ಮುಖದ ಮೇಲೆ ಬೆಡ್‌ಶೀಟ್‌ನಿಂದ ಒತ್ತಿದ್ದಾರೆ.
ನಂತರ ಧೋತಿಯಿಂದ ಅವರ ಕೈಗಳನ್ನು ತೊಡೆಗಳಿಗೆ ಕಟ್ಟಿದ್ದಾರೆ. ಕಾಲುಗಳನ್ನು ಟವಲ್‌ನಿಂದ ಕಟ್ಟಿದ್ದಾರೆ. ಅವರ ಮೇಲೆ ಹತ್ತಿ ತುಳಿದಿದ್ದಾರೆ. ಕುತ್ತಿಗೆ ಮತ್ತು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಯಾವುದೇ ಆಯುಧಗಳನ್ನು ಬಳಸಿಲ್ಲ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಕೊಲೆಯ ನಂತರ ಆರೋಪಿಗಳು ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.
ಆಗಸ್ಟ್ 17ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದು, ಅದೇ ದಿನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಾಲಕರು ಕೊಲೆಯ ದೃಶ್ಯವನ್ನು ವಾಟ್ಸ್ ಆ್ಯಪ್ ವೀಡಿಯೊ ಕರೆ ಮೂಲಕ ಬಾಲಕಿಗೆ ತೋರಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕದಲ್ಲಿದ್ದ ಆರೋಪಿಗಳು ಸುಮಾರು ಎರಡು ತಿಂಗಳಿಂದ ಈ ಕೊಲೆಗೆ ಸಂಚು ರೂಪಿಸಿದ್ದರು.
ಆರೋಪಿಗಳ ಮೊಬೈಲ್‌ನಲ್ಲಿದ್ದ ಎಲ್ಲಾ ಚಾಟ್‌ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದರ ಪರಿಶೀಲನೆಗಾಗಿ ಮೆಟಾ ಸಂಸ್ಥೆಯಿಂದ ಮಾಹಿತಿ ಕೋರಿದ್ದಾರೆ. ಈ ವರದಿಯನ್ನು ಬಾಲ ನ್ಯಾಯ ಮಂಡಳಿಗೆ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಫೋನ್‌ಗಳಿಂದ ಪೊಲೀಸರು ಆರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಒಂದು ಸಿಮ್ ಕಾರ್ಡ್ ಮಾತ್ರ ಕೊಲೆಯಾದ ದಿನ ಸಕ್ರಿಯವಾಗಿತ್ತು. ಅತ್ಯಂತ ನಿಖರ ಯೋಜನೆಯೊಂದಿಗೆ ನಡೆದ ಕೃತ್ಯ ಎಂಬುದಕ್ಕೆ ಇದು ಸಾಕ್ಷಿ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸೈಬರ್ ತಜ್ಞರ ನೆರವಿನಿಂದ ಸಿಮ್ ಮಾಹಿತಿಯನ್ನು ಕಲೆ ಹಾಕಲಾಗಿದೆ.
ಈ ಪ್ರಕರಣದಲ್ಲಿ 87 ಸಾಕ್ಷಿಗಳು, 98 ದಾಖಲೆಗಳು ಮತ್ತು 12 ವಸ್ತುಗಳನ್ನು ಸಾಕ್ಷ್ಯಾಧಾರವಾಗಿ ನೀಡಲಾಗಿದೆ. ಆರೋಪಿಗಳು ಹರಿಪಾಡ್ ರೈಲ್ವೆ ನಿಲ್ದಾಣದಲ್ಲಿ ಇಳಿದು, ಮನೆಗೆ ತಲುಪಿ, ಕೃತ್ಯದ ನಂತರ ಹಿಂದಿರುಗುತ್ತಿರುವ 6 ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರಮುಖ ಸಾಕ್ಷ್ಯವಾಗಿ ಉಲ್ಲೇಖಿಸಲಾಗಿದೆ.
ಕೊಲೆಯಲ್ಲಿ ಭಾಗಿಯಾಗಿದ್ದ ಮೂವರು ಬಾಲಕರನ್ನು ಅಪ್ರಾಪ್ತರ ಬದಲಿಗೆ ವಯಸ್ಕರು ಎಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಪ್ರಾಸಿಕ್ಯೂಷನ್ ಕೋರಿದೆ. ಅಪರಾಧದ ಗಂಭೀರತೆ, ಆರೋಪಿಗಳ ಸಾಮಾಜಿಕ ಹಿನ್ನೆಲೆ ಮತ್ತು ಅವರ ಮಾನಸಿಕ ಸ್ಥಿತಿ ಪರಿಶೀಲಿಸಿದ ನಂತರ ಬಾಲ ನ್ಯಾಯ ಮಂಡಳಿ ಈ ಬಗ್ಗೆ ತೀರ್ಮಾನಿಸಲಿದೆ. ಬಾಲಕಿಯ ವಿಚಾರಣೆಯನ್ನು ಬಾಲ ನ್ಯಾಯ ಮಂಡಳಿ ನಡೆಸಲಿದೆ.




