Monday, September 14, 2026

ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಅನಾಹತ್ ಸಿಂಗ್; ವಿಶ್ವ ಜೂನಿಯರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯೆ

ಕೆನಡಾ : ಭಾರತದ ಯುವ ಸ್ಕ್ವಾಶ್ ತಾರೆ ಅನಾಹತ್ ಸಿಂಗ್ ಶನಿವಾರ ಇತಿಹಾಸ ನಿರ್ಮಿಸಿದ್ದು, ವಿಶ್ವ ಜೂನಿಯರ್ ಸ್ಕ್ವಾಶ್ ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

ಕೆನಡಾದ ಒಂಟಾರಿಯೊ ರಾಜ್ಯದ ನಿಯಾಗರಾ-ಆನ್-ದಿ-ಲೇಕ್‌ನಲ್ಲಿ ನಡೆದ ಫೈನಲ್‌ನಲ್ಲಿ ವಿಶ್ವ ಕ್ರಮಾಂಕ 20 ಹಾಗೂ ಟೂರ್ನಿಯ ಅಗ್ರ ಶ್ರೇಯಾಂಕಿತೆ ಅನಾಹತ್ ಸಿಂಗ್, ಈಜಿಪ್ಟ್‌ನ ಎರಡನೇ ಶ್ರೇಯಾಂಕಿತೆ ರುಕಯ್ಯಾ ಸಲೇಮ್ ಅವರನ್ನು 11-3, 11-7, 11-9 ನೇರ ಗೇಮ್‌ಗಳಲ್ಲಿ ಮಣಿಸಿ ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಕಳೆದ ವರ್ಷ ಇದೇ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಅನಾಹತ್, ಈ ಬಾರಿ ಚಾಂಪಿಯನ್ ಆಗುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

15 ವರ್ಷಗಳ ಈಜಿಪ್ಟ್ ಪ್ರಾಬಲ್ಯಕ್ಕೆ ತೆರೆ ಈ ಗೆಲುವಿನೊಂದಿಗೆ ಅನಾಹತ್ ಸಿಂಗ್, 2010ರಲ್ಲಿ ಅಮೆರಿಕದ ಅಮಾಂಡಾ ಸೋಭಿ ಬಳಿಕ ವಿಶ್ವ ಜೂನಿಯರ್ ಸ್ಕ್ವಾಶ್ ಪ್ರಶಸ್ತಿ ಗೆದ್ದ ಮೊದಲ ಈಜಿಪ್ಟ್ ಹೊರಗಿನ ಆಟಗಾರ್ತಿಯಾಗಿದ್ದಾರೆ.

ಇದರೊಂದಿಗೆ 2011ರಿಂದ ನಿರಂತರವಾಗಿ ವಿಶ್ವ ಜೂನಿಯರ್ ಪ್ರಶಸ್ತಿಯನ್ನು ಗೆದ್ದಿದ್ದ ಈಜಿಪ್ಟ್ ಆಟಗಾರ್ತಿಯರ 15 ವರ್ಷಗಳ ಪ್ರಾಬಲ್ಯಕ್ಕೂ ಅನಾಹತ್ ತೆರೆ ಎಳೆದಿದ್ದಾರೆ.

21 ವರ್ಷಗಳ ಬಳಿಕ ಫೈನಲ್ ತಲುಪಿದ ಭಾರತೀಯೆ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಅನಾಹತ್, ಈಜಿಪ್ಟ್‌ನ ಬಾರ್ಬ್ ಸಮೇಹ್ ಅವರನ್ನು ನಾಲ್ಕು ಗೇಮ್‌ಗಳಲ್ಲಿ ಮಣಿಸಿ 21 ವರ್ಷಗಳ ಬಳಿಕ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಫೈನಲ್‌ನಲ್ಲೂ ಮತ್ತೊಬ್ಬ ಈಜಿಪ್ಟ್ ಆಟಗಾರ್ತಿಯನ್ನು ಮಣಿಸುವ ಮೂಲಕ ತಮ್ಮ ಅದ್ಭುತ ಋತುವಿಗೆ ಚಿನ್ನದ ಮೆರಗು ತಂದಿದ್ದಾರೆ.

ಗೆಲುವಿನ ಬಳಿಕ ಅನಾಹತ್ ಪ್ರತಿಕ್ರಿಯೆ “ನನಗೆ ತುಂಬಾ ಸಂತೋಷವಾಗಿದೆ. ಕೆಲವು ತಿಂಗಳ ಹಿಂದೆ ಬ್ರಿಟಿಷ್ ಜೂನಿಯರ್ ಓಪನ್‌ನಲ್ಲಿ ಬಾರ್ಬ್ ವಿರುದ್ಧ ಆಡಿದ್ದೆ. ಅದು ಕೂಡ ಇಂತಹದ್ದೇ ಕಠಿಣ ಪಂದ್ಯವಾಗಿತ್ತು. ಆದ್ದರಿಂದ ಇಂದು ಅತ್ಯುತ್ತಮ ಆಟವಾಡಬೇಕೆಂದು ತಿಳಿದಿತ್ತು.

ನಿನ್ನೆ ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಿರಲಿಲ್ಲ. ಇಂದು ನನ್ನ ಸಾಮರ್ಥ್ಯವನ್ನು ಕೋರ್ಟ್‌ನಲ್ಲಿ ತೋರಿಸಬೇಕೆಂದು ನಿರ್ಧರಿಸಿದ್ದೆ. ನಾಲ್ಕು ಬಾರಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದೇನೆ. ಕ್ವಾರ್ಟರ್‌ಫೈನಲ್ ಹಾಗೂ ಸೆಮಿಫೈನಲ್‌ನಲ್ಲಿ ಸೋತಿದ್ದೆ. ಈಗ ಫೈನಲ್ ತಲುಪಿರುವುದು ನನ್ನ ಪೋಷಕರು ಹಾಗೂ ಕೋಚ್‌ಗಳಿಗೆ ತುಂಬಾ ಸಂತೋಷ ತಂದಿದೆ. ಆದರೆ ನನ್ನ ಗುರಿ ಇನ್ನೂ ಪೂರ್ಣವಾಗಿರಲಿಲ್ಲ,” ಎಂದು ಸೆಮಿಫೈನಲ್ ಬಳಿಕ ಅನಾಹತ್ ಹೇಳಿದ್ದರು.

ಪುರುಷರ ವಿಭಾಗದಲ್ಲಿ ಈಜಿಪ್ಟ್ ಪ್ರಾಬಲ್ಯ ಮುಂದುವರಿಕೆ ಪುರುಷರ ವಿಭಾಗದಲ್ಲಿ ಈಜಿಪ್ಟ್‌ನ ಅಗ್ರ ಶ್ರೇಯಾಂಕಿತ ಮೊಹಮ್ಮದ್ ಜಕಾರಿಯಾ ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ್ದು, ಮೂರನೇ ವಿಶ್ವ ಜೂನಿಯರ್ ಪ್ರಶಸ್ತಿಯತ್ತ ಹೆಜ್ಜೆ ಇಟ್ಟಿದ್ದಾರೆ.

ಸೆಮಿಫೈನಲ್‌ನಲ್ಲಿ ಅವರು ಸೆಲ್ಫೆಲ್ಡಿನ್ ರೆಫಾಯ್ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿದರು. ಫೈನಲ್‌ನಲ್ಲಿ ಜಕಾರಿಯಾ, ಈಜಿಪ್ಟ್‌ನ ಎರಡನೇ ಶ್ರೇಯಾಂಕಿತ ಆಡಂ ಹವಾಲ್ ಅವರನ್ನು ಎದುರಿಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಮರ್ವಾನ್ ಅಸ್ಸಲ್ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಹವಾಲ್ ಫೈನಲ್‌ಗೆ ಪ್ರವೇಶಿಸಿದರು.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.