ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಪ್ರತಿಭಟನೆಗಳಿಂದ ಹಬ್ಬದ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ ಎಂದು ದೇಶದ ವಿವಿಧ ವ್ಯಾಪಾರ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಪ್ರತಿಭಟನೆ ಮತ್ತು ಭದ್ರತಾ ನಿರ್ಬಂಧಗಳಿಂದ ಮಾರುಕಟ್ಟೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರತಿಭಟನೆಗಳನ್ನು ಹಿಂಪಡೆಯುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿವೆ.
ಚುನಾವಣಾ ಆಯೋಗದ ವಿರುದ್ಧ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ವಿವಿಧೆಡೆ ಪ್ರತಿಭಟನೆ ನಡೆಸುತ್ತಿವೆ. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೂ ಪ್ರತಿಪಕ್ಷಗಳು ಆಗ್ರಹಿಸಿವೆ.
ಈ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಭದ್ರತಾ ನಿರ್ಬಂಧ, ರಸ್ತೆ ತಡೆ ಮತ್ತು ಮಾರುಕಟ್ಟೆ ಮುಚ್ಚುವಂತಹ ಕ್ರಮಗಳಿಂದ ಜನರ ಸಂಚಾರ ಹಾಗೂ ವ್ಯಾಪಾರಕ್ಕೆ ಅಡಚಣೆಯಾಗುತ್ತಿದೆ ಎಂಬುದು ವ್ಯಾಪಾರಿಗಳ ಆತಂಕ. ನವರಾತ್ರಿ ಹಬ್ಬ ನಡೆಯುತ್ತಿದ್ದು, ದಸರಾ, ದೀಪಾವಳಿ ಮತ್ತು ಛಠ್ ಪೂಜೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ವ್ಯಾಪಾರ ವಲಯದ ಕಳವಳ ಹೆಚ್ಚಿಸಿದೆ.
ರಾಷ್ಟ್ರೀಯ ವ್ಯಾಪಾರಿಗಳ ಕಲ್ಯಾಣ ಮಂಡಳಿ, ನವದೆಹಲಿ ವ್ಯಾಪಾರಿಗಳ ಸಂಘ, ಭಾರತೀಯ ಉದ್ಯಮ ವ್ಯಾಪಾರ ಮಂಡಳಿ, ಜೈಪುರ ವ್ಯಾಪಾರ ಮಹಾಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗಳ ಪರಿಣಾಮದ ಬಗ್ಗೆ ಧ್ವನಿ ಎತ್ತಿವೆ.
ರಾಷ್ಟ್ರೀಯ ವ್ಯಾಪಾರಿಗಳ ಕಲ್ಯಾಣ ಮಂಡಳಿಯ ಸದಸ್ಯ ಸಿರಾಜುದ್ದೀನ್ ಎಲ್ಲತೋಡಿ ವಿಡಿಯೋ ಸಂದೇಶದ ಮೂಲಕ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ. ಹಬ್ಬದ ಋತುವಿನ ಮಾರಾಟವನ್ನೇ ಅವಲಂಬಿಸಿರುವ ಅನೇಕ ವ್ಯಾಪಾರಿಗಳ ವ್ಯವಹಾರಕ್ಕೆ ಪ್ರತಿಭಟನೆಗಳಿಂದ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಂಡಳಿಯ ಮತ್ತೊಬ್ಬ ಸದಸ್ಯ ಅಜಯ್ ಗುಪ್ತಾ ಕೂಡ ಪ್ರತಿಭಟನೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಹಬ್ಬದ ವ್ಯಾಪಾರಕ್ಕಾಗಿ ವ್ಯಾಪಾರಿಗಳು ಸಾಲ ಪಡೆದು ಹೂಡಿಕೆ ಮಾಡುತ್ತಾರೆ. ಆದರೆ ಪ್ರತಿಭಟನೆಗಳಿಂದ ಕೆಲಸಕ್ಕೆ ಅಡ್ಡಿಯಾಗುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಪ್ರತಿಭಟನೆಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.
ಪ್ರತಿಭಟನೆ ಹಕ್ಕಿನ ಜೊತೆಗೆ ಜನಜೀವನಕ್ಕೂ ಆದ್ಯತೆ ನೀಡಿ
ದೆಹಲಿ ದಾಲ್ ಮತ್ತು ಬೆಸನ್ ಮಿಲ್ಲರ್ಸ್ ಅಸೋಸಿಯೇಷನ್ನ ಸದಸ್ಯ ಘನಶ್ಯಾಮ್ ದಾಸ್ ಗೋಯಲ್ ಅವರು ರಾಹುಲ್ ಗಾಂಧಿಗೆ ಪತ್ರ ಬರೆದು, ಹಬ್ಬದ ಋತುವು ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಉತ್ಪಾದಕರು ಹಾಗೂ ಸಗಟು ವ್ಯಾಪಾರಿಗಳಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.
“ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಪ್ರಮುಖ ಹಕ್ಕು. ಆದರೆ ದೇಶದ ಆರ್ಥಿಕ ಚಟುವಟಿಕೆಗಳು ಮತ್ತು ಸಾಮಾನ್ಯ ಜನರ ಜೀವನೋಪಾಯವನ್ನು ರಕ್ಷಿಸುವುದೂ ಅಷ್ಟೇ ಮುಖ್ಯ” ಎಂದು ಅವರು ಹೇಳಿದ್ದಾರೆ. ಮಾರುಕಟ್ಟೆ, ಸಾರಿಗೆ ಮತ್ತು ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗದಂತೆ ಪ್ರತಿಭಟನೆ ಹಿಂಪಡೆಯಬೇಕು ಅಥವಾ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಉಲ್ಸೂರು ಕ್ಲಾಕ್ ಮರ್ಚೆಂಟ್ಸ್ ಅಸೋಸಿಯೇಷನ್ನ ಸದಸ್ಯ ಪ್ರಕಾಶ್ ಪಿರ್ಗಲ್ ಕೂಡ ದಸರಾ, ದೀಪಾವಳಿ ಹಾಗೂ ಮದುವೆ ಋತುವಿನ ಮುನ್ನ ರಸ್ತೆ ತಡೆಗಳು ವ್ಯಾಪಾರಕ್ಕೆ ಹೊಡೆತ ನೀಡುತ್ತಿವೆ ಎಂದು ಹೇಳಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸುವ ಬದಲು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ.




