ನವದೆಹಲಿ: ಭಾರತದ ಭೌಗೋಳಿಕ ಸೂಚ್ಯಂಕ (Geographical Indication – GI) ವ್ಯವಸ್ಥೆ ಸಂಪ್ರದಾಯ ಮತ್ತು ಆರ್ಥಿಕ ಅವಕಾಶಗಳ ನಡುವಿನ ಸೇತುವೆಯಾಗಿ ರೂಪುಗೊಳ್ಳುತ್ತಿದ್ದು, 2030ರೊಳಗೆ 10,000 ಜಿಐ ನೋಂದಣಿಗಳನ್ನು ಸಾಧಿಸುವ ಗುರಿಯೊಂದಿಗೆ ದೇಶವು ತನ್ನ ಸಾಂಸ್ಕೃತಿಕ ಪರಂಪರೆಯ ಆರ್ಥಿಕತೆಯನ್ನು ಬಲಪಡಿಸಿ, ವಿಶಿಷ್ಟ ಪ್ರಾದೇಶಿಕ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಾನಮಾನ ಕಲ್ಪಿಸಲು ಮುಂದಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪತ್ರದಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಪ್ರಸ್ತುತ 800ಕ್ಕೂ ಹೆಚ್ಚು ಜಿಐ ಉತ್ಪನ್ನಗಳು ನೋಂದಾಯಿತವಾಗಿದ್ದು, 2014ರಿಂದ ಈವರೆಗೆ 607 ಜಿಐ ಮಾನ್ಯತೆಗಳನ್ನು ನೀಡಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಜಿಐ ಟ್ಯಾಗ್ ಹೊಂದಿರುವ ಅಧಿಕೃತ ಬಳಕೆದಾರರ ಸಂಖ್ಯೆ 365ರಿಂದ 29,000ಕ್ಕೆ (2025ರ ಜನವರಿ ವೇಳೆಗೆ) ಏರಿಕೆಯಾಗಿದೆ.
2025ರ ತಿದ್ದುಪಡಿಯ ಮೂಲಕ ಜಿಐ ಅರ್ಜಿ ಸಲ್ಲಿಕೆ ಹಾಗೂ ಸಂಬಂಧಿತ ಪ್ರಕ್ರಿಯೆಗಳ ಶುಲ್ಕವನ್ನು ಶೇಕಡಾ 80ರಷ್ಟು ಕಡಿತಗೊಳಿಸಲಾಗಿದೆ. ಜಿಐ ಟ್ಯಾಗ್ ನವೀಕರಣ ಶುಲ್ಕವನ್ನೂ 3,000 ರೂ.ಗಳಿಂದ ಕೇವಲ 500 ರೂ.ಗಳಿಗೆ ಇಳಿಸಲಾಗಿದೆ.
ಮುಕ್ತ ವ್ಯಾಪಾರ ಒಪ್ಪಂದಗಳು (Free Trade Agreements – FTAs) ವಿಶಿಷ್ಟ ಪ್ರಾದೇಶಿಕ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಮೂಲಕ ಜಿಐ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸುತ್ತವೆ. ಜಿಐ ಟ್ಯಾಗ್ ಉತ್ಪನ್ನದ ಮೂಲ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿದರೆ, ಎಫ್‌ಟಿಎಗಳು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಿ ರಫ್ತು ಅವಕಾಶಗಳನ್ನು ವಿಸ್ತರಿಸುತ್ತವೆ. ಈ ಹಿನ್ನೆಲೆಯಲ್ಲಿ ಭಾರತದ ವ್ಯಾಪಾರ ಮಾತುಕತೆಗಳಲ್ಲಿ ಜಿಐಗೆ ಮಹತ್ವದ ಸ್ಥಾನ ಲಭಿಸಿದೆ ಎಂದು ಮಾಹಿತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜಿಐ ಟ್ಯಾಗ್ ಉತ್ಪನ್ನಗಳನ್ನು ಅವುಗಳ ಮೂಲ ಪ್ರದೇಶದೊಂದಿಗೆ ಗುರುತಿಸುವ ಮೂಲಕ ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದರ ಜೊತೆಗೆ ದುರುಪಯೋಗವನ್ನು ತಡೆದು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದ ಕುಶಲಕರ್ಮಿಗಳು, ನೇಕಾರರು, ರೈತರು ಹಾಗೂ ಉತ್ಪಾದಕರ ಗುಂಪುಗಳಿಗೆ ಉತ್ತಮ ಮಾರುಕಟ್ಟೆ ಗುರುತಿನೊಂದಿಗೆ ಪ್ರೀಮಿಯಂ ಮಾರುಕಟ್ಟೆ ಪ್ರವೇಶದ ಅವಕಾಶ ಸಿಗುತ್ತದೆ.
ಸರ್ಕಾರದ ವಿವಿಧ ಯೋಜನೆಗಳ ಮೂಲಕ ಆರ್ಥಿಕ ನೆರವು, ರಫ್ತು ಉತ್ತೇಜನ, ಪ್ರವಾಸೋದ್ಯಮದೊಂದಿಗೆ ಜಿಐ ಉತ್ಪನ್ನಗಳ ಸಂಪರ್ಕ ಹಾಗೂ ವಿಶೇಷ ಮಾರುಕಟ್ಟೆ ವೇದಿಕೆಗಳ ಮೂಲಕ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಈ ಕ್ರಮಗಳಿಂದ ಜಿಐ ಉತ್ಪನ್ನಗಳು ಗ್ರಾಮೀಣಾಭಿವೃದ್ಧಿ, ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಮತ್ತು ರಫ್ತು ಆಧಾರಿತ ಆರ್ಥಿಕ ಬೆಳವಣಿಗೆಯ ಪ್ರಮುಖ ಸಾಧನಗಳಾಗಿ ರೂಪುಗೊಳ್ಳುತ್ತಿವೆ.
“ಜಿಐ ಟ್ಯಾಗ್ ಕೇವಲ ಕಾನೂನುಬದ್ಧ ರಕ್ಷಣೆಯಲ್ಲ; ಅದು ಉತ್ಪನ್ನದ ಮೂಲ, ಪರಂಪರೆ ಮತ್ತು ವಿಶಿಷ್ಟತೆಯನ್ನು ದೃಢೀಕರಿಸುವ ಪ್ರಾಮಾಣಿಕತೆಯ ಮುದ್ರೆಯಾಗಿದೆ,” ಎಂದು ಮಾಹಿತಿ ಪತ್ರ ತಿಳಿಸಿದೆ.
ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆಗಳಿಗೆ 2006ರಲ್ಲಿ ಜಿಐ ಮಾನ್ಯತೆ ದೊರೆತಿತ್ತು. ಈ ಮಾನ್ಯತೆ ಚನ್ನಪಟ್ಟಣ ಪ್ರದೇಶದಲ್ಲಿ ಸಾಂಪ್ರದಾಯಿಕ ಲ್ಯಾಕರ್ ಕಲೆಯನ್ನು ಬಳಸಿ ತಯಾರಾಗುವ ಮರದ ಆಟಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಪ್ರಮಾಣಪತ್ರದಂತಿದ್ದರೂ ಈ ಟ್ಯಾಗ್ ದೂರಗಾಮಿ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಯೋಜನಗಳನ್ನು ಒದಗಿಸುತ್ತದೆ.
ಕೇಂದ್ರ ಜವಳಿ ಸಚಿವಾಲಯದ ಪ್ರಕಾರ, ಜಿಐ ಟ್ಯಾಗ್ ಗ್ರಾಮೀಣ ಕುಶಲಕರ್ಮಿಗಳ ಆದಾಯವನ್ನು ಶೇಕಡಾ 20ರಿಂದ 30ರವರೆಗೆ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಉತ್ಪನ್ನದ ಮೂಲ ಮತ್ತು ಪರಂಪರೆಯನ್ನು ದೃಢೀಕರಿಸುವ ಮೂಲಕ ಖರೀದಿದಾರರಲ್ಲಿ ವಿಶ್ವಾಸ ಮೂಡಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ.
ಜಿಐ ಟ್ಯಾಗ್ ಪಡೆದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಕುಶಲಕರ್ಮಿಗಳಿಗೆ ಹೆಚ್ಚಿನ ಮಾರುಕಟ್ಟೆ ಗುರುತಿನೊಂದಿಗೆ ಉತ್ತಮ ಬೆಲೆ, ಪ್ರೀಮಿಯಂ ಮಾರುಕಟ್ಟೆ ಪ್ರವೇಶ ಹಾಗೂ ಹೆಚ್ಚಿನ ಆದಾಯವನ್ನು ಒದಗಿಸುತ್ತಿದೆ. ಜೊತೆಗೆ, ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವಲ್ಲಿ ಜಿಐ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ.
ಭಾರತದಲ್ಲಿ ಕರಕುಶಲ ಉತ್ಪನ್ನಗಳು, ಕೃಷಿ ಉತ್ಪನ್ನಗಳು, ತಯಾರಿತ ವಸ್ತುಗಳು, ಆಹಾರ ಉತ್ಪನ್ನಗಳು ಮತ್ತು ನೈಸರ್ಗಿಕ ಉತ್ಪನ್ನಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಜಿಐ ಟ್ಯಾಗ್ ಪಡೆದ ಅನೇಕ ಉತ್ಪನ್ನಗಳಿವೆ.




