ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತ ವೇಟ್‌ಲಿಫ್ಟಿಂಗ್ ತಂಡದ ಪ್ರದರ್ಶನ ಕುರಿತು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (WFI) ಅಧ್ಯಕ್ಷ ಸಾಹದೇವ್ ಯಾದವ್ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ತಂಡದ ಪ್ರದರ್ಶನದಲ್ಲಿ ಇನ್ನೂ ಸುಧಾರಣೆಗೆ ಅವಕಾಶವಿದೆ ಎಂದು ಹೇಳಿದ ಅವರು, ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಚಿನ್ನದ ಸಾಧನೆಯನ್ನು ವಿಶೇಷವಾಗಿ ಶ್ಲಾಘಿಸಿದರು.
ಮೀರಾಬಾಯಿ ಚಾನು ಅವರ ಪ್ರದರ್ಶನವನ್ನು ಪ್ರಶಂಸಿಸಿದ ಸಾಹದೇವ್ ಯಾದವ್, ದೀರ್ಘಾವಧಿಯ ಗುರಿಯನ್ನು ಗಮನದಲ್ಲಿಟ್ಟುಕೊಂಡು ಅವರು ಸ್ಪರ್ಧಿಸಿದ್ದರೆಂದು ಹೇಳಿದರು. ಮೀರಾಬಾಯಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ನಾಲ್ಕನೇ ಪದಕವನ್ನು ಗೆದ್ದಿದ್ದಾರೆ. ಅವರು 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಬೆಳ್ಳಿ, 2018ರ ಗೋಲ್ಡ್ ಕೋಸ್ಟ್ ಹಾಗೂ 2022ರ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಗ್ಲಾಸ್ಗೋದಲ್ಲಿ ಒಟ್ಟು 190 ಕೆಜಿ (ಸ್ನ್ಯಾಚ್ 85 ಕೆಜಿ + ಕ್ಲೀನ್ ಅಂಡ್ ಜರ್ಕ್ 105 ಕೆಜಿ) ಭಾರ ಎತ್ತುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಜೊತೆಗೆ ಸ್ನ್ಯಾಚ್, ಕ್ಲೀನ್ ಅಂಡ್ ಜರ್ಕ್ ಹಾಗೂ ಒಟ್ಟು ಭಾರ ಎತ್ತುವ ವಿಭಾಗಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನೂ ಮುರಿದರು.
“ಮೀರಾಬಾಯಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳದೆ ನಿಯಂತ್ರಿತ ಪ್ರದರ್ಶನ ನೀಡಿದರು. ಏಕೆಂದರೆ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಅವರನ್ನು ಒಂದು ಕೆಜಿ ಹೆಚ್ಚಿನ ತೂಕದ ವಿಭಾಗದಲ್ಲಿ ಸ್ಪರ್ಧಿಸಲು ತಂತ್ರಾತ್ಮಕವಾಗಿ ಸಿದ್ಧಪಡಿಸುತ್ತಿದ್ದೇವೆ,” ಎಂದು ಸಾಹದೇವ್ ಯಾದವ್ ತಿಳಿಸಿದ್ದಾರೆ.
ಪುರುಷರ 65 ಕೆಜಿ ವಿಭಾಗದಲ್ಲಿ ಮುತ್ತುಪಾಂಡಿ ರಾಜಾ ಒಟ್ಟು 286 ಕೆಜಿ (126 ಕೆಜಿ + 160 ಕೆಜಿ) ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು. ಸ್ನ್ಯಾಚ್‌ನಲ್ಲಿ ಮೊದಲ ಪ್ರಯತ್ನದಲ್ಲೇ 125 ಕೆಜಿ ಯಶಸ್ವಿಯಾಗಿ ಎತ್ತಿದ ಅವರು, ಎರಡನೇ ಪ್ರಯತ್ನದಲ್ಲಿ 126 ಕೆಜಿ ಭಾರ ಎತ್ತಿದರು.
ಆದರೆ ಮೂರನೇ ಪ್ರಯತ್ನದಲ್ಲಿ 129 ಕೆಜಿ ಎತ್ತಲು ವಿಫಲರಾದರು. ಕ್ಲೀನ್ ಅಂಡ್ ಜರ್ಕ್‌ನಲ್ಲಿ 158 ಕೆಜಿ ಹಾಗೂ 160 ಕೆಜಿ ಯಶಸ್ವಿಯಾಗಿ ಎತ್ತಿದ ಅವರು, ಕೊನೆಯ ಪ್ರಯತ್ನದಲ್ಲಿ 170 ಕೆಜಿ ಎತ್ತಲು ಸಾಧ್ಯವಾಗಲಿಲ್ಲ.
ರಾಜಾ ಅವರ ಪ್ರದರ್ಶನದ ಬಗ್ಗೆ ಸಾಹದೇವ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು.
“ರಾಜಾ ಅವರ ಪ್ರದರ್ಶನದಿಂದ ನನಗೆ ಸಂಪೂರ್ಣ ತೃಪ್ತಿ ಇಲ್ಲ. ಅವರು ಹಿಂದೆ 172 ಕೆಜಿ ಭಾರ ಎತ್ತಿದ್ದರು. ಎಲ್ಲಾ ಪ್ರಯತ್ನಗಳಲ್ಲೂ ಯಶಸ್ವಿಯಾಗಿದ್ದರೆ ಚಿನ್ನದ ಪದಕ ವಿಜೇತರಿಗೆ ಉತ್ತಮ ಪೈಪೋಟಿ ನೀಡಬಹುದಿತ್ತು. ಈ ಮಟ್ಟದ ಸ್ಪರ್ಧೆಯಲ್ಲಿ ಒಂದು ಲಿಫ್ಟ್ ಕೈತಪ್ಪಿದರೂ ಅದರ ಪರಿಣಾಮ ದೊಡ್ಡದಾಗುತ್ತದೆ,” ಎಂದು ಅವರು ಐಎಎನ್‌ಎಸ್‌ಗೆ ತಿಳಿಸಿದರು.
ರಾಜಾ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ತಲೆಮಾರಿನ ವೇಟ್‌ಲಿಫ್ಟರ್‌ಗಳನ್ನು ಬೆಳೆಸುವತ್ತ ಫೆಡರೇಶನ್ ಗಮನ ಹರಿಸುತ್ತಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಪುರುಷರ 60 ಕೆಜಿ ವಿಭಾಗದಲ್ಲಿ ರಿಷಿಕಾಂತ ಸಿಂಗ್ ಬೆಳ್ಳಿ ಪದಕ ಗೆದ್ದು ಭಾರತದ ಪದಕ ಬೇಟೆಗೆ ಚಾಲನೆ ನೀಡಿದ್ದರು. ಮಣಿಪುರದ 28 ವರ್ಷದ ವೇಟ್‌ಲಿಫ್ಟರ್ ರಿಷಿಕಾಂತ ಒಟ್ಟು 264 ಕೆಜಿ (121 ಕೆಜಿ + 143 ಕೆಜಿ) ಭಾರ ಎತ್ತಿ 11 ಸ್ಪರ್ಧಿಗಳ ಪೈಕಿ ಎರಡನೇ ಸ್ಥಾನ ಪಡೆದಿದ್ದರು.
ರಿಷಿಕಾಂತ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ ಸಾಹದೇವ್ ಯಾದವ್, ಒಂದು ಪ್ರಮುಖ ಲಿಫ್ಟ್ ನಿರ್ಣಾಯಕವಾಗಿತ್ತು ಎಂದು ಹೇಳಿದರು.
“ರಿಷಿಕಾಂತ ಚೆನ್ನಾಗಿ ಪ್ರದರ್ಶನ ನೀಡಿದರು. ಆದರೆ ಒಂದು ಲಿಫ್ಟ್‌ಗೆ ಅನುಮೋದನೆ ಸಿಗಬೇಕಿತ್ತು. ಅದು ಸಿಗದ ಕಾರಣ ಪದಕದ ಬಣ್ಣವೇ ಬದಲಾಗಿದೆ. ಪುರುಷರ ವಿಭಾಗದಲ್ಲಿ ನಾವು ಎರಡೂ ಚಿನ್ನದ ಪದಕಗಳನ್ನು ಕೈಚೆಲ್ಲಬೇಕಾಯಿತು,” ಎಂದು ಹೇಳಿದರು.
ಸೋಮವಾರ ನಡೆಯಲಿರುವ ಪುರುಷರ 71 ಕೆಜಿ, ಮಹಿಳೆಯರ 53 ಕೆಜಿ ಹಾಗೂ 58 ಕೆಜಿ ವಿಭಾಗಗಳಲ್ಲಿ ಭಾರತ ಪದಕಗಳ ನಿರೀಕ್ಷೆಯಲ್ಲಿದೆ. “ಸೋಮವಾರ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆಲ್ಲಲಿದೆ ಎಂಬ ನಿರೀಕ್ಷೆ ಇದೆ,” ಎಂದು ಸಾಹದೇವ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.




