Tuesday, September 15, 2026

ಬುಮ್ರಾಸ್ತ್ರಕ್ಕೆ ಬಿರುಕು? ಜಸ್‌ಪ್ರೀತ್ ಬುಮ್ರಾ ವಿರುದ್ಧ ಬ್ಯಾಟರ್‌ಗಳ ಸಿಕ್ಸರ್ ಮಳೆ

ವಿಶಾಖಪಟ್ಟಣ: ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ ಪ್ರಸ್ತುತ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಬೌಲಿಂಗ್‌ ವಿರುದ್ಧ ಬ್ಯಾಟರ್‌ಗಳು ದಿಟ್ಟವಾಗಿ ದಾಳಿ ನಡೆಸುತ್ತಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತಿದೆ.

ಭಾರತ ಪರ ಈವರೆಗೆ 86 ಟಿ20 ಪಂದ್ಯಗಳನ್ನು ಆಡಿರುವ ಬುಮ್ರಾ 107 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ವಿಶೇಷವೆಂದರೆ, ತಮ್ಮ ಟಿ20 ಕರಿಯರ್‌ನಲ್ಲಿ ಅವರು ಒಮ್ಮೆಯೂ ಐದು ವಿಕೆಟ್‌ಗಳ ಸಾಧನೆ ಮಾಡಿಲ್ಲ. ಅದಷ್ಟೇ ಅಲ್ಲದೆ, ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೊಂಚಲನ್ನೂ ಪಡೆದಿಲ್ಲ.

ಡೆತ್ ಓವರ್‌ಗಳಲ್ಲಿ ಹೆಚ್ಚುತ್ತಿರುವ ರನ್‌ಗಳ ಹೊರೆ

ವಿಶಾಖಪಟ್ಟಣದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಬುಮ್ರಾ ಒಂದೇ ಓವರ್‌ನಲ್ಲಿ 19 ರನ್‌ಗಳನ್ನು ಬಿಟ್ಟುಕೊಟ್ಟರು. 2017ರ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ 18 ಕ್ಕಿಂತ ಹೆಚ್ಚು ರನ್ ನೀಡಿರದ ಬುಮ್ರಾ, ಈ ಪಂದ್ಯದಲ್ಲಿ ಆ ದಾಖಲೆಯನ್ನು ಮುರಿದರು. ಅದು ಕೂಡ 19ನೇ ಓವರ್‌ನಲ್ಲಿ ಎಂಬುದು ಗಮನಾರ್ಹ.

ಇದೇ ಸರಣಿಯ ಮೊದಲ ಪಂದ್ಯದಲ್ಲೂ ಅವರು 18ನೇ ಓವರ್‌ನಲ್ಲಿ 15 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅಂದರೆ ಒಂದೇ ಸರಣಿಯಲ್ಲಿ ಎರಡು ಬಾರಿ ಡೆತ್ ಓವರ್‌ಗಳಲ್ಲಿ 15 ಅಥವಾ ಅದಕ್ಕಿಂತ ಹೆಚ್ಚು ರನ್ ನೀಡಿದ ಅಪರೂಪದ ಘಟನೆ ನಡೆದಿದೆ.

ಇದಕ್ಕೂ ಮುನ್ನ ಡಿಸೆಂಬರ್ 2025ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯೊಂದೇ ಪಂದ್ಯದಲ್ಲಿ ಬುಮ್ರಾ ಎರಡು ಓವರ್‌ಗಳಲ್ಲಿ ತಲಾ 15ಕ್ಕೂ ಹೆಚ್ಚು ರನ್‌ಗಳನ್ನು ನೀಡಿದ್ದರು. ಡಿಸೆಂಬರ್ 11ರಂದು ನ್ಯೂ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಪವರ್‌ಪ್ಲೇ ಓವರ್‌ನಲ್ಲಿ 16 ರನ್ ಹಾಗೂ ಅಂತಿಮ ಓವರ್‌ನಲ್ಲಿ 17 ರನ್‌ಗಳನ್ನು ಚಚ್ಚಿಸಿಕೊಂಡಿದ್ದರು.

ವಿಶಾಖಪಟ್ಟಣದ ಪಂದ್ಯದಲ್ಲಿ ಬುಮ್ರಾ ತಮ್ಮ ನಾಲ್ಕು ಓವರ್‌ಗಳಲ್ಲಿ ಒಟ್ಟು 38 ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಇದು ಟಿ20 ಮಾನದಂಡದಲ್ಲಿ ದುಬಾರಿ ಪ್ರದರ್ಶನವೆನ್ನಬಹುದು.

ಸಿಕ್ಸರ್‌ಗಳ ಸಂಖ್ಯೆಯಲ್ಲಿ ಭಾರೀ ಏರಿಕೆ

ಇತ್ತೀಚಿನ ಎರಡು ವರ್ಷಗಳಲ್ಲಿ ಬುಮ್ರಾ ವಿರುದ್ಧ ಸಿಕ್ಸರ್‌ಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ.

  • 2024ರಲ್ಲಿ ಅವರು 15 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.
  • 2025ರಲ್ಲಿ ಇದುವರೆಗೆ 13 ಸಿಕ್ಸರ್‌ಗಳು ಅವರ ಬೌಲಿಂಗ್‌ನಲ್ಲಿ ಮೂಡಿಬಂದಿವೆ.

ಸೌತ್ ಆಫ್ರಿಕಾ ವಿರುದ್ಧದ ಒಂದೇ ಪಂದ್ಯದಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದು, ಇದು ಅವರ ಟಿ20 ಕರಿಯರ್‌ನಲ್ಲೇ ಮೊದಲ ಬಾರಿಗೆ ಸಂಭವಿಸಿದ ಘಟನೆ. ಇದಕ್ಕೂ ಮೊದಲು ಒಂದೇ ಪಂದ್ಯದಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಅವರು ಬಿಟ್ಟುಕೊಟ್ಟಿರಲಿಲ್ಲ.

2024ರ ಅಂತ್ಯದ ವೇಳೆಗೆ 250 ಓವರ್‌ಗಳಲ್ಲಿ ಕೇವಲ 35 ಸಿಕ್ಸರ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದ ಬುಮ್ರಾ, ಒಂದೇ ವರ್ಷದೊಳಗೆ 15 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿರುವುದು ಅವರ ಮೇಲಿನ ಒತ್ತಡವನ್ನು ತೋರಿಸುತ್ತದೆ.

ವಿಕೆಟ್‌ಗಳ ಕೊರತೆ, ಕುಸಿತದ ಸೂಚನೆ?

ಕಳೆದ 12 ತಿಂಗಳಲ್ಲಿ ಬುಮ್ರಾ 16 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಕೇವಲ 18 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಈ ಪಂದ್ಯಗಳಲ್ಲಿ ಒಮ್ಮೆಯೂ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಅವರು ಕಬಳಿಸಿಲ್ಲ.

ಇವೆಲ್ಲ ಅಂಕಿ-ಅಂಶಗಳು ಜಸ್‌ಪ್ರೀತ್ ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯ ನಿಧಾನವಾಗಿ ಕುಸಿಯುತ್ತಿದೆಯೇ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತಿವೆ. ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಬುಮ್ರಾಸ್ತ್ರದ ವಿರುದ್ಧ ಬ್ಯಾಟರ್‌ಗಳು ಸಿಕ್ಸರ್‌ ಅಸ್ತ್ರ ಪ್ರಯೋಗಿಸುತ್ತಿರುವುದು ಟೀಮ್ ಇಂಡಿಯಾ ಚಿಂತೆಯ ವಿಷಯವಾಗುತ್ತಿದೆ.

More like this
Related

ಕಂಡ್ಲೂರು ಹಳೆ ಸೇತುವೆ ನೆಲಸಮದ ಹುನ್ನಾರದ ಹಿಂದೆ ಭ್ರಷ್ಟಾಚಾರದ ಅನುಮಾನ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ ತೀರ್ಥಹಳ್ಳಿ ಸಂಪರ್ಕ ಮಾಡುವ ರಾಜ್ಯ ಹೆದ್ದಾರಿ ಹಾದು ಹೋಗುವ ವರಾಹಿ...

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.