T20 World Cup 2026 | ನವದೆಹಲಿ: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಪಾಕಿಸ್ತಾನ್ ತಂಡ ಹೊರಗುಳಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಇದು ಕೇವಲ ನಾಟಕವಷ್ಟೇ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಿರುಗೇಟು ನೀಡಿದ್ದಾರೆ.
ಟಿ20 ವಿಶ್ವಕಪ್ 2026ರಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಬಾಂಗ್ಲಾದೇಶ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಅವರ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ಟೂರ್ನಿಯಿಂದ ಹೊರಗುಳಿಯುವ ಬೆದರಿಕೆ ಒಡ್ಡಿದ್ದು, ಇದು ಕ್ರಿಕೆಟ್ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
‘ಪಾಕಿಸ್ತಾನ ಟೂರ್ನಿ ಆಡುತ್ತೆ, ಕಾದು ನೋಡಿ’
ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಮೊಹಮ್ಮದ್ ಕೈಫ್, “ಪಾಕಿಸ್ತಾನ ಟಿ20 ವಿಶ್ವಕಪ್ ಆಡುತ್ತದೆ. ಈ ಬಹಿಷ್ಕಾರದ ಮಾತುಗಳು ಬರೀ ನಾಟಕ. ಅವರು ಪ್ರಚಾರಕ್ಕಾಗಿ ಇಂಥ ಹೇಳಿಕೆಗಳನ್ನು ಕೊಡುತ್ತಾರೆ ಅಷ್ಟೇ. ನೀವೇ ಕಾದು ನೋಡಿ, ಪಾಕಿಸ್ತಾನ ಖಂಡಿತವಾಗಿ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದೆ” ಎಂದು ಹೇಳಿದ್ದಾರೆ.
ಬಾಂಗ್ಲಾದೇಶ ತಂಡದ ಪರವಾಗಿ ನಿಂತಂತೆ ತೋರಿಸಿಕೊಳ್ಳುವುದು ಪಾಕಿಸ್ತಾನದ ಸಹಾನುಭೂತಿ ಪಡೆಯುವ ಪ್ರಯತ್ನ ಮಾತ್ರ. ಇಲ್ಲಿಯವರೆಗೆ ಅವರು ಹೀಗೆಯೇ ನಡೆದುಕೊಂಡು ಬಂದಿದ್ದಾರೆ. ಹೀಗಾಗಿ ವಿಶ್ವಕಪ್ ಬಹಿಷ್ಕಾರ ಎನ್ನುವುದು ಗೊಡ್ಡು ಬೆದರಿಕೆ ಅಷ್ಟೇ, ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶಕ್ಕೆ ಪಾಕ್ ಬೆಂಬಲದ ನಾಟಕ
ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, “ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಕಣಕ್ಕಿಳಿಯುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಅಂತಿಮ ನಿರ್ಧಾರ ಪಾಕಿಸ್ತಾನ ಸರ್ಕಾರದ ಕೈಯಲ್ಲಿದೆ” ಎಂದು ಹೇಳಿಕೆ ನೀಡಿದ್ದರು.
ಈ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ಗೆ ಬೆಂಬಲ ಸೂಚಿಸುವ ನೆಪದಲ್ಲಿ, ಪಾಕಿಸ್ತಾನ ಪರೋಕ್ಷವಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಬೆದರಿಕೆ ಒಡ್ಡಿದೆ ಎನ್ನಲಾಗಿದೆ.
ಆರ್ಥಿಕ ಒತ್ತಡದ ಆಟ?
ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಗುಳಿದರೆ, ಟಿ20 ವಿಶ್ವಕಪ್‌ಗೆ ಭಾರೀ ಆರ್ಥಿಕ ನಷ್ಟ ಉಂಟಾಗಲಿದೆ ಎಂಬ ಲೆಕ್ಕಾಚಾರವನ್ನು ಪಿಸಿಬಿ ಮಾಡಿಕೊಂಡಿದೆ. ಅದರಲ್ಲೂ ಭಾರತ–ಪಾಕಿಸ್ತಾನ ನಡುವಣ ಪಂದ್ಯ ನಡೆಯದಿದ್ದರೆ, ವಿಶ್ವಕಪ್ ಟೂರ್ನಿಯೇ ವಿಫಲವಾಗುವ ಸಾಧ್ಯತೆ ಇದೆ.
ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬಿಸಿಸಿಐ ಹಾಗೂ ಐಸಿಸಿಗೆ ಒತ್ತಡ ತರುವ ಪ್ರಯತ್ನದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೊಡಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಐಸಿಸಿಯಿಂದ ಕಠಿಣ ಎಚ್ಚರಿಕೆ
ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕಾರಕ್ಕೆ ಸುಳಿವು ನೀಡಿದ ಬೆನ್ನಲ್ಲೇ, ಐಸಿಸಿ ಕೂಡ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ. ಪಾಕಿಸ್ತಾನ್ ತಂಡ ಟೂರ್ನಿಯಿಂದ ಹೊರಗುಳಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಬ್ಯಾನ್ ಮಾಡುವ ಸಾಧ್ಯತೆ ಇದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.




