ಯುಡಿ ನ್ಯೂಸ್ ಡಾಟ್ ಕಾಮ್
ಹುಬ್ಬಳ್ಳಿ: ತಾಂತ್ರಿಕ ದೋಷದಿಂದಾಗಿ ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡ Fly91 ಏರ್ಲೈನ್ಸ್ ವಿಮಾನ 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ ನಡೆಸಿದ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್ ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿ ಏರ್ಪೋರ್ಟ್ ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಭಾರಿ ಪ್ರಯತ್ನ ನಡೆಸಲಾಗಿದೆಯಾದರೂ, ಅಂತಿಮವಾಗಿ ಅದು ಸಾಧ್ಯವಿಲ್ಲ ಎಂಬುದನ್ನು ಅರಿತು 4 ಗಂಟೆ ಕಾಲ ಮುಂಡಗೋಡ, ದಾವಣಗೆರೆ, ಶಿವಮೊಗ್ಗ ಪ್ರದೇಶದಲ್ಲಿ ಸುತ್ತಾಟ ನಡೆಸಿ ಸಂಜೆ 7.30ಕ್ಕೆ ಬೆಂಗಳೂರು ಏರ್ಪೋರ್ಟ್ ನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ.
ಲ್ಯಾಂಡ್ ಆಗದೆ ವಿಮಾನ ಆಗಸದಲ್ಲೇ ಸುತ್ತಾಡುತ್ತಿದ್ದ ಕಾರಣ ಆತಂಕದಲ್ಲಿದ್ದ Fly91 ಏರ್ಲೈನ್ಸ್ ವಿಮಾನದಲ್ಲಿದ್ದ ಪ್ರಯಾಣಿಕರು ಕಣ್ಣೀರಿಟ್ಟಿರುವ ಪ್ರಸಂಗವೂ ನಡೆದಿದೆ. ನಾವಿನ್ನೂ ಜೀವಂತವಾಗಿ ಬರುವುದು ಅನುಮಾನವಿದೆ ಎಂದು ಕೆಲವರು ಕುಟುಂಬಸ್ಥರಿಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ನಡುವೆ Fly91 ಏರ್ಲೈನ್ಸ್ ವಿರುದ್ಧ ಪ್ರಯಾಣಿಕರ ಕುಟುಂಬಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದು, ಘಟನೆ ಬಗ್ಗೆ ಮಾಹಿತಿ ನೀಡದೆ ಏರ್ಲೈನ್ಸ್ ನಿರ್ಲಕ್ಷ್ಯ ತೋರಿದ ಆರೋಪ ಕೂಡ ಕೇಳಿಬಂದಿದೆ.
ವಿಮಾನದ ಲ್ಯಾಂಡಿಂಗ್ ವೇಳೆ ಅಸಲಿಗೆ ಆದ ಸಮಸ್ಯೆ ಏನು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರಯಾಣಿಕರು ಹೇಳುವಂತೆ ತಾಂತ್ರಿಕದೋಷದಿಂದ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ಆದರೆ ಮೂಲಗಳ ಪ್ರಕಾರ ಹವಾಮಾನ ವೈಪರಿತ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.




