ಬೆಂಗಳೂರು: ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಅವರ ಡೈರಿಯಿಂದ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ.
ಡೈರಿ ಬರೆಯುವ ಹವ್ಯಾಸ ಹೊಂದಿದ್ದ ಸಿಜೆ ರಾಯ್ ಅವರ ಡೈರಿಯಲ್ಲಿ ಪ್ರಭಾವಿ ರಾಜಕಾರಣಿಗಳು, ಶಾಸಕರು ಹಾಗೂ ಒಬ್ಬ ಸಂಸದರ ಹೆಸರಿನ ಉಲ್ಲೇಖವಿರುವುದು ಪತ್ತೆಯಾಗಿದೆ. ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಕೆಲ ಶಾಸಕರ ಹೆಸರುಗಳನ್ನೂ ಅವರು ದಾಖಲಿಸಿಕೊಂಡಿದ್ದರೆಂದು ತಿಳಿದುಬಂದಿದೆ. ಇದಲ್ಲದೆ ಚಿತ್ರರಂಗದ ಹಲವು ನಟಿಯರು ಮತ್ತು ಮಾಡೆಲ್‌ಗಳ ಹೆಸರುಗಳನ್ನೂ ಡೈರಿಯಲ್ಲಿ ಉಲ್ಲೇಖಿಸಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.
ಈ ಬೆಳವಣಿಗೆಗಳ ನಡುವೆ, ಸಿಜೆ ರಾಯ್ ಸಾವಿನ ಬೆನ್ನಲ್ಲೇ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಭುವನ್ ಪೊನ್ನಣ್ಣ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ವೈರಲ್ ಆಗಿದೆ. ತಮ್ಮ ಪೋಸ್ಟ್‌ನಲ್ಲಿ, “ನಾವು ಪ್ರೀತಿಯಿಂದ ಕರೆಯುತ್ತಿದ್ದ ಡಾ. ರಾಯ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು ಹಾಗೂ ಆಘಾತವಾಯಿತು. ಅವರು ಯಾವಾಗಲೂ ಜೀವನ ಮತ್ತು ಮಹತ್ವಾಕಾಂಕ್ಷೆಯಿಂದ ತುಂಬಿದ್ದವರು” ಎಂದು ಬರೆದಿದ್ದಾರೆ.
“ಹಣ ಮತ್ತು ಭೌತಿಕ ಲಾಭಗಳ ವಿಷಯಕ್ಕೆ ಬಂದಾಗ ಮಾನವೀಯತೆ ಸತ್ತಿದೆ ಎಂದು ಕೆಲವೊಮ್ಮೆ ಅನಿಸುತ್ತದೆ. ಕಾರಣ ಯಾರೇ ಆಗಿರಲಿ, ಅವರು ಕರ್ಮವನ್ನು ಎದುರಿಸಬೇಕಾಗುತ್ತದೆ. ಓಂ ಶಾಂತಿ ಡಾ. ರಾಯ್. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮನ್ನು ಎಂದಿಗೂ ಸ್ಮರಿಸುತ್ತೇವೆ” ಎಂದು ಭುವನ್ ಪೊನ್ನಣ್ಣ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ಗೆ ಗುಲಾಬಿ ಹೂ ಹಾಗೂ ಕೈಮುಗಿಯುವ ಚಿಹ್ನೆಗಳನ್ನು ಕೂಡ ಅವರು ಸೇರಿಸಿದ್ದಾರೆ.
ಸಿಜೆ ರಾಯ್ ಅವರ ಡೈರಿಯಲ್ಲಿರುವ ಮಾಹಿತಿಗಳ ಆಧಾರದಲ್ಲಿ ಪೊಲೀಸರು ತನಿಖೆಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದ್ದು, ಈ ಪ್ರಕರಣ ರಾಜ್ಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.




