Saturday, May 30, 2026

ಮೈಸೂರಿನಲ್ಲಿ ರಹಸ್ಯ ಹೈಟೆಕ್ ಡ್ರಗ್ಸ್ ಘಟಕ ಬಯಲು: ಗೃಹ ಇಲಾಖೆ ವೈಫಲ್ಯ ಎಂದ ಬಿಜೆಪಿ ಕಿಡಿ

ಬೆಂಗಳೂರು: ಮೈಸೂರಿನಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಹೈಟೆಕ್ ಡ್ರಗ್ಸ್ ತಯಾರಿಕಾ ಘಟಕವನ್ನು ಎನ್‌ಸಿಬಿ (NCB) ಬಯಲುಗೊಳಿಸಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಯ ವಿರುದ್ಧ ಬಿಜೆಪಿ ತೀವ್ರ ಟೀಕೆ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, “ಮೈಸೂರಿನಲ್ಲಿ ಹೈಟೆಕ್ ಡ್ರಗ್ಸ್ ಘಟಕ ಕಾರ್ಯನಿರ್ವಹಿಸುತ್ತಿದ್ದುದನ್ನು ಎನ್‌ಸಿಬಿ ಬಯಲುಗೊಳಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಡ್ರಗ್ಸ್ ದಂಧೆಯ ಜಾಲ ಮತ್ತು ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದರು. ಇದು ರಾಜ್ಯದ ಗೃಹ ಇಲಾಖೆಯ ಅಸಮರ್ಥತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರ ನೇರ ಹೊಣೆ ಗೃಹ ಸಚಿವ ಪರಮೇಶ್ವರ್ ಅವರದ್ದೇ” ಎಂದು ಆರೋಪಿಸಿದ್ದಾರೆ.

ಯುವಜನತೆ ಹಾಗೂ ಶಾಲಾ ಮಕ್ಕಳು ಕೂಡ ಡ್ರಗ್ಸ್ ಎಂಬ ಅಪಾಯಕಾರಿ ಜಾಲಕ್ಕೆ ಬಲಿಯಾಗುತ್ತಿರುವ ವರದಿಗಳು ಪದೇಪದೇ ಹೊರಬರುತ್ತಿದ್ದರೂ, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಅಸಾಮರ್ಥ್ಯ ಮತ್ತು ವೈಫಲ್ಯಗಳು ಅದರ ಆದ್ಯತೆ ಹಾಗೂ ಕಾಳಜಿಗಳನ್ನು ಬಯಲು ಮಾಡಿವೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಪೊಲೀಸ್ ಇಲಾಖೆಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿ, ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುವಂತಾಗಿದೆ” ಎಂದು ಅವರು ಆರೋಪಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದಾಗ, “ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ” ಎಂದು ಗೃಹ ಸಚಿವ ಪರಮೇಶ್ವರ್ ಉಡಾಫೆ ಉತ್ತರ ನೀಡಿದ್ದರು ಎಂದು ಅಶೋಕ್ ಟೀಕಿಸಿದರು. ಶೌರ್ಯ, ಸಾಹಸ ಮತ್ತು ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ, ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ ಎಂದು ಹೇಳಿದರು.

“ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯನ್ನು ಪತ್ತೆ ಹಚ್ಚಲು ಮಹಾರಾಷ್ಟ್ರ ಪೊಲೀಸರು ಬರಬೇಕಾದರೆ, ನಮ್ಮ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ?” ಎಂದು ಪ್ರಶ್ನಿಸಿರುವ ಅವರು, ಡ್ರಗ್ಸ್ ದಂಧೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

More like this
Related

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಆಯ್ಕೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ...

ಐಪಿಎಲ್ 2026 ಫೈನಲ್: ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಕಾದಾಟ ಇಂದು;

ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು 2022ರ ಚಾಂಪಿಯನ್ ಗುಜರಾತ್ ಟೈಟನ್ಸ್ ನಡುವೆ...

ಕೇರಳದಲ್ಲಿ ಭಾರೀ ಡ್ರಗ್ಸ್ ಜಾಲ ಭೇದನೆ; ₹70 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

ಆಪರೇಷನ್ ಚಕ್ರವ್ಯೂಹ’ ಅಡಿಯಲ್ಲಿ ಡಿಆರ್‌ಐ ಕಾರ್ಯಾಚರಣೆ; 24 ಕೆ.ಜಿ.ಗಿಂತ ಹೆಚ್ಚು ಮಾದಕ...

ಪತ್ನಿಯನ್ನು ಗಂಟೆಗಳ ಕಾಲ ‘ಕೋಳಿ’ ಭಂಗಿಯಲ್ಲಿ ನಿಲ್ಲಿಸಿ ಹಿಂಸೆ; ತಪ್ಪಿಸಿಕೊಂಡ ಬಳಿಕ ಚಾಕುವಿನಿಂದ ಇರಿದ ಪತಿ ಬಂಧನ

ಮುಂಬೈನಲ್ಲಿ ಅಮಾನುಷ ಘಟನೆ; ಪತ್ನಿಗೆ ಕತ್ತಿಯಿಂದ ಬೆದರಿಕೆ, ಆಸಿಡ್ ದಾಳಿ ಮಾಡುವುದಾಗಿ...

Copying is disabled on Udupi Digital News.