Friday, June 26, 2026

“ಸಿಎಂ ಶಿವಕುಮಾರ್ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ”: ಅಡ್ಡಮತದಾನ ವಿವಾದಕ್ಕೆ ತೆರೆ ಎಳೆಯಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಪಷ್ಟನೆ

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ (ಕ್ರಾಸ್‌ ವೋಟಿಂಗ್) ವಿವಾದದ ನಡುವೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಶುಕ್ರವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ತನಗೆ “ಯಾವುದೇ ರೀತಿಯ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದರು. ಅಡ್ಡಮತದಾನಕ್ಕೆ ತಾವು ಕಾರಣ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದರು.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ವ್ಯವಹಾರಿಕ ಸಂಬಂಧವಿಲ್ಲ. ವೈಯಕ್ತಿಕ ಆತ್ಮೀಯತೆಯೂ ಇಲ್ಲ. ಅವರು ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಕಾರಣ ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡಿದ್ದೇನೆ. ಇದನ್ನು ಹೊರತುಪಡಿಸಿ ಯಾವುದೇ ಸಂಪರ್ಕ ಇಲ್ಲ ಎಂಬುದನ್ನು ಮತ್ತೆ ಸ್ಪಷ್ಟಪಡಿಸುತ್ತೇನೆ,” ಎಂದರು.

ಅಡ್ಡಮತದಾನದ ಘಟನೆಯ ಬಳಿಕ ತಮ್ಮ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

“ನನ್ನ ವಿರುದ್ಧ ನಡೆಯುತ್ತಿರುವ ದುಷ್ಪ್ರಚಾರದ ಬಗ್ಗೆ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಇಂತಹ ಪ್ರಚಾರ ನಡೆಸುತ್ತಿರುವವರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ,” ಎಂದು ಹೇಳಿದರು.

“ಈ ಪವಿತ್ರ ಕ್ಷೇತ್ರದಲ್ಲಿ ನಿಂತು ನಾನು ಹೇಳುವುದೇನೆಂದರೆ, ಅಡ್ಡಮತದಾನದ ನಂತರ ನನ್ನ ಮತ್ತು ಮುಖ್ಯಮಂತ್ರಿ ಶಿವಕುಮಾರ್ ನಡುವೆ ವ್ಯವಹಾರಿಕ ಸಂಬಂಧವಿದೆ, ಆತ್ಮೀಯತೆ ಇದೆ ಎಂಬ ರೀತಿಯಲ್ಲಿ ವದಂತಿಗಳನ್ನು ಹಬ್ಬಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾನು ಅಡ್ಡಮತದಾನಕ್ಕೆ ಕಾರಣ ಎನ್ನುವ ರೀತಿಯ ಚರ್ಚೆಗಳು ನಡೆದಿವೆ. ಮಾಧ್ಯಮಗಳಲ್ಲಿಯೂ ಇದೇ ವಿಷಯ ಚರ್ಚೆಯಾಗಿದೆ. ಈ ಪ್ರಚಾರದ ಹಿಂದೆ ನಮ್ಮವರೇ ಇದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಗಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯಾಧ್ಯಕ್ಷರ ಜವಾಬ್ದಾರಿ ನೀಡಿದ್ದಾರೆ. ಆ ಸ್ಥಾನದಲ್ಲಿರುವ ನಾನು ಇಂತಹ ಮಟ್ಟಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ,” ಎಂದು ಅವರು ಹೇಳಿದರು.

ವಿಧಾನ ಪರಿಷತ್ ಚುನಾವಣೆಯ ವಿವಾದದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಬಿಜೆಪಿ ಶಾಸಕರ ಹೆಸರುಗಳನ್ನು ಎಳೆದು ತಂದು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

“ನಮ್ಮ 63 ಬಿಜೆಪಿ ಶಾಸಕರಿಗೆ ನಾನು ಹೇಳುವುದೇನೆಂದರೆ, ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ನಮ್ಮ ಶಾಸಕರ ಹೆಸರುಗಳನ್ನು ಅಡ್ಡಮತದಾನದೊಂದಿಗೆ ಜೋಡಿಸುತ್ತಿದೆ. ಇದರಿಂದ ಅವರ ಕ್ಷೇತ್ರಗಳ ಜನರು ತಮ್ಮ ಶಾಸಕರನ್ನೇ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಹೇಳಿದರು.

“ಪಕ್ಷಕ್ಕೆ ದ್ರೋಹ ಮಾಡಿದವರ ಮೇಲೆ ನಮ್ಮ ರಾಷ್ಟ್ರೀಯ ನಾಯಕತ್ವದ ಕಣ್ಣಿದೆ. ಸತ್ಯ ಒಂದು ದಿನ ಹೊರಬರುತ್ತದೆ. ನಾನು ಇಂತಹ ಕೆಲಸ ಮಾಡಿದ್ದರೆ ಅದು ಕೂಡ ಪಕ್ಷದ ದ್ರೋಹವೇ ಆಗುತ್ತಿತ್ತು. ನನ್ನ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು. ಇಂದಿನಿಂದ ಈ ಚರ್ಚೆ ಅಂತ್ಯವಾಗಬೇಕು. ಮುಂದಿನ ದಿನಗಳಲ್ಲಿ ನಾನು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಮುಖ್ಯಮಂತ್ರಿ ಎಷ್ಟೇ ಪ್ರಬಲರಾಗಿದ್ದರೂ, ಅವರ ಹಣದ ಹಾಗೂ ಅಧಿಕಾರದ ಬಲ ಎಷ್ಟೇ ಇದ್ದರೂ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮುಂದಿನ ಎರಡು ವರ್ಷ ಪಕ್ಷ ಮತ್ತು ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಪ್ತ ಮತದಾನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಚುನಾವಣೆ ಗುಪ್ತ ಮತದಾನದಿಂದ ನಡೆದಿದೆಯೇ ಇಲ್ಲವೇ ಎಂಬುದು ಮುಖ್ಯವಲ್ಲ. ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಅಲ್ಲಿಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಯಾರೂ ಬಿಡುವುದಿಲ್ಲ. ಅಡ್ಡಮತದಾನದ ಕುರಿತು ಸಿ.ಟಿ. ರವಿ ನೇತೃತ್ವದ ಸತ್ಯಶೋಧನಾ ಸಮಿತಿ ಸಲ್ಲಿಸಿರುವ ವರದಿಯನ್ನು ನಾನು ಇನ್ನೂ ನೋಡಿಲ್ಲ,” ಎಂದರು.

ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಎಸ್.ಟಿ. ಸೋಮಶೇಖರ್ ಕುರಿತು ಮಾತನಾಡಿದ ವಿಜಯೇಂದ್ರ, “ಸೋಮಶೇಖರ್ ಅವರು ಮೂವರು ಬಿಜೆಪಿ ಶಾಸಕರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ನಮ್ಮ ಬಳಿ ಇದೆ. ಅವರು ಮನಸ್ಸಿಗೆ ಬಂದಂತೆ ಮಾತನಾಡಬಹುದು. ಆದರೆ ಸತ್ಯ ಒಂದು ದಿನ ಹೊರಬರುತ್ತದೆ,” ಎಂದರು.

ಅಡ್ಡಮತದಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಣ ಎಂದು ಸೋಮಶೇಖರ್ ಮಾಡಿರುವ ಆರೋಪ ಹಾಗೂ ತಮ್ಮ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವಿನ ಭಿನ್ನಾಭಿಪ್ರಾಯವೂ ಕಾರಣ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, “ಅವರು ಹೇಳುವುದನ್ನು ಹೇಳಲಿ. ಸತ್ಯ ಹೊರಬರುತ್ತದೆ,” ಎಂದು ಹೇಳಿದರು.

ರಾಜ್ಯದಲ್ಲಿ ಅನೇಕ ಜನಪರ ಸಮಸ್ಯೆಗಳಿದ್ದು, ಬಿಜೆಪಿ ಅವುಗಳ ವಿರುದ್ಧ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

“ನಾನು ಇದನ್ನು ಅಹಂಕಾರದಿಂದ ಅಲ್ಲ, ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ಪಕ್ಷದ ಸಂಘಟನೆ ಮತ್ತು ಲಕ್ಷಾಂತರ ಕಾರ್ಯಕರ್ತರ ಮೇಲೆ ನನಗೆ ನಂಬಿಕೆ ಇದೆ. ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುತ್ತೇವೆ,” ಎಂದು ಹೇಳಿದರು.

ಧರ್ಮಸ್ಥಳಕ್ಕೆ ಬಂದಿರುವ ಉದ್ದೇಶವನ್ನು ವಿವರಿಸಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ದುಡಿದ ಲಿಂಗರಾಜ್ ಪಾಟೀಲ್ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು ಎಂದು ಹೇಳಿದರು.

“ರಘು ಕೌಟಿಲ್ಯ 29 ಮತಗಳನ್ನು ಪಡೆದರು. ಲಿಂಗರಾಜ್ ಪಾಟೀಲ್ 27 ಮತಗಳನ್ನು ಪಡೆದು ಇಬ್ಬರೂ ಗೆದ್ದರು. ಆದರೆ ಅಡ್ಡಮತದಾನದಿಂದ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಮತ್ತು ನನಗೆ ಅಪಾರ ನೋವಾಗಿದೆ. ಅದರಿಂದಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಧರ್ಮಸ್ಥಳದಲ್ಲಿ ನಡೆಸಿ, ಶಾಸಕರಿಂದ ಪ್ರಮಾಣ ಮಾಡಿಸಬೇಕು ಎಂದು ನಾನು ಸೂಚಿಸಿದ್ದೆ,” ಎಂದರು.

“ನಾನು ಭಾವನಾತ್ಮಕ ವ್ಯಕ್ತಿ. ಆ ಸಂದರ್ಭದಲ್ಲಿ ಮನಸ್ಸಿಗೆ ಬಂದದ್ದನ್ನು ಹೇಳಿದ್ದೆ. ಆದರೆ ಹಿರಿಯ ನಾಯಕರು ಅಷ್ಟು ದೂರ ಹೋಗಬಾರದು, ವಿಷಯವನ್ನು ಪಕ್ಷದ ಹೈಕಮಾಂಡ್‌ಗೆ ಬಿಡಬೇಕು, ಅಂತಿಮವಾಗಿ ಸತ್ಯ ಹೊರಬರುತ್ತದೆ ಎಂದು ಸಲಹೆ ನೀಡಿದರು. ಅವರ ಅಭಿಪ್ರಾಯವನ್ನು ಗೌರವಿಸಿ ನಾನು ಇಂದು ಭಕ್ತನಾಗಿ ಇಲ್ಲಿ ಬಂದಿದ್ದೇನೆ,” ಎಂದು ಹೇಳಿದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಟೀಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, 2019ರ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿದರು.

“2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ 17 ಶಾಸಕರು ರಾಜೀನಾಮೆ ನೀಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಬಿಜೆಪಿ ಸೇರಿದರು. ನಂತರ ನಡೆದ ಉಪಚುನಾವಣೆಯಲ್ಲಿ ಅವರಲ್ಲಿ 15 ಮಂದಿ ಗೆದ್ದರು. ಈಶ್ವರಪ್ಪ ಅವರ ಹೇಳಿಕೆಯ ನಂತರ ಅನೇಕ ಶಾಸಕರು ನನಗೆ ಕರೆ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ,” ಎಂದರು.

“ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 18ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಸಾವಿರಾರು ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆ ಸಮಯದಲ್ಲಿ ಆ ಶಾಸಕರು ನಮ್ಮ ಜೊತೆ ಸೇರಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದು ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು. ಆಗ ಈಶ್ವರಪ್ಪ ಅವರೇ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಬಹುಶಃ ಅವರು ಅದನ್ನು ಮರೆತಿರಬಹುದು,” ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಕುರಿತು ಮಾತನಾಡಿದ ಅವರು, “ಅಡ್ಡಮತದಾನದ ವಿವಾದದ ನಂತರವೇ ಸದಾನಂದ ಗೌಡ ಅವರು ನನಗೆ ಕರೆ ಮಾಡಿದರು. ಅದಕ್ಕೂ ಮೊದಲು ಅವರು ಈ ವಿಷಯದಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ,” ಎಂದರು.

ಕಳೆದ ಕೆಲವು ದಿನಗಳ ಚಟುವಟಿಕೆಗಳ ಬಗ್ಗೆ ಮಾತನಾಡಿದ ವಿಜಯೇಂದ್ರ, “ಕಳೆದ ಎರಡು-ಮೂರು ದಿನಗಳಿಂದ ನಾನು ನವದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ, ಅಲ್ಲಿಂದ ನೇರವಾಗಿ ಮಂಗಳೂರಿಗೆ ಬಂದು, ನಂತರ ಧರ್ಮಸ್ಥಳಕ್ಕೆ ಬಂದಿದ್ದೇನೆ. ಇಂದು ಬೆಳಗ್ಗೆ ಶಾಸಕರು ಮತ್ತು ಹಿರಿಯ ನಾಯಕರೊಂದಿಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದೇನೆ,” ಎಂದರು.

“ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಸ್ಥಿತಿ ನಿವಾರಣೆಯಾಗಲಿ, ಉತ್ತಮ ಮಳೆಯಾಗಲಿ, ರೈತರು ಸಮೃದ್ಧರಾಗಲಿ, ಅವರ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರಕಲಿ ಎಂದು ಪ್ರಾರ್ಥಿಸಿದ್ದೇನೆ,” ಎಂದು ಹೇಳಿದರು.

“ಅದರ ಜೊತೆಗೆ ಕರ್ನಾಟಕದಲ್ಲಿ ಯಾವಾಗ ಚುನಾವಣೆ ನಡೆದರೂ ಜನಪರ ಸರ್ಕಾರ, ಹಿಂದೂಗಳ ಹಿತ ಕಾಪಾಡುವ ಸರ್ಕಾರ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ,” ಎಂದು ವಿಜಯೇಂದ್ರ ಹೇಳಿದರು.

More like this
Related

ಮಲ್ಪೆಯಲ್ಲಿ ಎಂ.ಡಿ.ಎಂ.ಎ ಮಾರಾಟ: ಯುವಕ ಬಂಧನ; ರೂ.1.52 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ...

ಕುಂದಾಪುರ ತಾಲೂಕು ಪತ್ರಕರ್ತರ ಸಂಘದಿಂದ ಎಸ್. ಜನಾರ್ದನ ಮರವಂತೆ ಅವರಿಗೆ ನುಡಿನಮನ

ಕುಂದಾಪುರ : ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ...

ಸಂಸದರು ವಾರಾಹಿ ನೀರಾವರಿ ಯೋಜನೆಯ ವಾಸ್ತವ ಅರಿತು ಮಾತನಾಡಲಿ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಸಿದ್ಧಾಪುರ ಗ್ರಾಮದ ಹೋರಿಯಬ್ಬೆಯಲ್ಲಿನ ವರಾಹಿ ಡೈವರ್ಶನ್ ವೀಯರ್ ಬಗ್ಗೆ ವಾಸ್ತವದ...

ಜರ್ಮನಿಗೆ ಶಾಕ್ ನೀಡಿದ ಈಕ್ವೆಡಾರ್; 2-1 ಜಯದೊಂದಿಗೆ ನಾಕೌಟ್‌ಗೆ ಐತಿಹಾಸಿಕ ಪ್ರವೇಶ

ನ್ಯೂಜೆರ್ಸಿ ಸ್ಟೇಡಿಯಂ: ನಾಲ್ಕು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಜರ್ಮನಿಗೆ ಆಘಾತ...

Copying is disabled on Udupi Digital News.