ಯುಡಿ ನ್ಯೂಸ್ ಡಾಟ್ ಕಾಮ್
ಕುಂದಾಪುರ: ಏನೇ ಮಾಡುವಾಗ ವೃತ್ತಿಯ ಜೊತೆಗೆ ಸಮಾಜದ ಪರಿಕಲ್ಪನೆ ಇರಬೇಕು. ಬಂದ ಆದಾಯದಲ್ಲಿ ಬಹುಪಾಲನ್ನು ಸಮಾಜಕ್ಕೆ ನೀಡಬೇಕು. ಈಗಿನ ಕಾಲಕ್ಕೆ ಕೌಶಲ್ಯ ಆಧಾರಿತ ವ್ಯಕ್ತಿಗಳ ಅವಶ್ಯಕತೆ ಇದ್ದು, ಇವರಿಗೆ ಜಾಗತಿಕವಾಗಿ ಬೇಡಿಕೆಯೂ ಇದೆ. ಇದನ್ನು ಗಮನಿಸಿಕೊಂಡು ಸಮಾಜದ ಪರಿಕಲ್ಪನೆಯಲ್ಲಿ, ಹುಟ್ಟೂರಿನ ಋಣ ತೀರಿಸಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡಿ ಉದ್ಯೋಗ ಕಲ್ಪಿಸಬೇಕೆಂಬ ಡಾ.ರಾಮಕೃಷ್ಣ ಆಚಾರ್ ಅವರ ಉದ್ದೇಶ ಶ್ಲಾಘನೀಯ ಎಂದು ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಕುಂದಾಪುರ ತಾಲೂಕಿನ ಯಡಾಡಿ ಮಾತ್ಯಾಡಿಯ ಗುಡ್ಡೆ ಅಂಗಡಿಯಲ್ಲಿ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್ ಕೆ ಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿಮಿಟೆಡ್, ಮೂಡುಬಿದಿರೆ ಇದರ ಎಸ್ ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಅನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಕೃಷ್ಣ ಆಚಾರ್ ಅವರು ಹೋರಾಟ ಮನೋಭಾವದವರು, ಬಹಳಷ್ಟು ಸೃಜನಶಕ್ತಿ ಇದ್ದವರು. ಸಜೃಜನಶೀಲನೆ ಹೊಂದಿದವರು. ಇವರು ತನ್ನ ವಹಿವಾಟನ್ನು ಕೇವಲ ದಕ್ಷಿಣ ಕನ್ನಡಕ್ಕೆ ಸೀಮಿತವಾಗಿರಿಸದೆ, ರಾಜ್ಯ ಮತ್ತು ದೇಶಕ್ಕೆ ಅಲ್ಲದೆ ವಿಸ್ತರಿಸಿ 21 ಪರದೇಶಗಳಿಗೆ ತನ್ನ ವಹಿವಾಟನ್ನು ಮಾಡಿಕೊಂಡು, ಬರಿಗೈಯಲ್ಲಿ ಬಂದಂತಹ ವ್ಯಕ್ತಿ ಇಂದು ವಾರ್ಷಿಕವಾಗಿ 400 ಕೋಟಿ ವಹಿವಾಟನ್ನು ಮಾಡುವುದು ಸಂತೋಷವನ್ನುಂಟು ಮಾಡಿದೆ. ಈ ಮಣ್ಣನ್ನು ಹಾಗೂ ಪರಿಸರವನ್ನು ನಂಬಿ ಬಂದರೆ ಏನನ್ನೂ ಮಾಡಬಹುದು ಎಂದು ತೋರಿಸಿಕೊಟ್ಟ ವ್ಯಕ್ತಿ ರಾಮಕೃಷ್ಣ ಆಚಾರ್ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಛೇರ್ಮನ್ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, ಈ ಊರಿಗೊಂದು ಏನಾದರೂ ಬದಲಾವಣೆ ತರಬೇಕು ಎನ್ನುವ ನಿಟ್ಟಿನಿಂದ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲಗಳನ್ನು ಅಭಿವೃದ್ಧಿಪಡಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ತರಬೇತಿ ಕೇಂದ್ರವನ್ನು ಆರಂಭಿಸುತ್ತಿದ್ದೇವೆ. ನಾವು ನೀಡುವ ತರಬೇತಿ ಸಂಪೂರ್ಣ ಕೌಶಲಾಧಾರಿತವಾಗಿದೆ. ಇಂಟರ್ನ್ ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ನೈಜ ಕೈಗಾರಿಕಾ ಅನುಭವ ಸಿಗುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಉದ್ಯೋಗಾವ ಕಾಶಗಳನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು.
ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಶುಭ ಹಾರೈಸಿದರು. ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಕಾರ್ಕಳ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಛೇರ್ಮನ್ ಡಾ. ಸುಧಾಕರ ಶೆಟ್ಟಿ, ಮಂಗಳೂರಿನ ಲೆಕ್ಕಪರಿಶೋಧಕ್ ಸಿಎ ಎಸ್. ಎಸ್. ನಾಯಕ್, ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ, ಮೊಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸುಜ್ಞಾನ ಎಜುಕೇಶನ್ ಟ್ರಸ್ಟ್ ಛೇರ್ಮನ್ ಡಾ. ರಮೇಶ್ ಶೆಟ್ಟಿ, ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಗೌರವ ಟ್ರಸ್ಟಿ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪುರ: ಎಸ್ ಕೆ ಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ




