ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಹರ್ಮನ್‌ಪ್ರೀತ್ ಕುಟುಂಬ, ತರಬೇತುದಾರರು, ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ 2026ರ ಮೊದಲ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರ್ಮನ್‌ಪ್ರೀತ್ ಅವರಿಗೆ ಈ ಗೌರವ ಲಭಿಸಿತು. ಮಾಜಿ ಭಾರತೀಯ ಪುರುಷರ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೂ ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. 2026ರ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಇಬ್ಬರು ಕ್ರಿಕೆಟಿಗರು ಇವರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಹರ್ಮನ್‌ಪ್ರೀತ್, ತಮ್ಮ ಜೀವನ ಪಯಣವನ್ನು ನೆನಪಿಸಿಕೊಂಡರು.
“ಇಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಈ ಕ್ಷಣದಲ್ಲಿ ನನ್ನ ಹೃದಯ ಕೃತಜ್ಞತೆ ಮತ್ತು ಹೆಮ್ಮೆಯಿಂದ ತುಂಬಿದೆ. ಈ ಗೌರವ ಕೇವಲ ನನ್ನದ್ದಲ್ಲ. ನನ್ನ ಪೋಷಕರು, ಕುಟುಂಬ, ತರಬೇತುದಾರರು, ಸಹ ಆಟಗಾರರು, ಸ್ನೇಹಿತರು ಹಾಗೂ ನನ್ನ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬರಿಗೂ ಸೇರಿದೆ,” ಎಂದು ಅವರು ಬರೆದುಕೊಂಡಿದ್ದಾರೆ.
“ಕಣ್ಣಿನಲ್ಲಿ ಕನಸುಗಳಿದ್ದ ಒಂದು ಚಿಕ್ಕ ಹುಡುಗಿಯಿಂದ ಭಾರತದ ಪರ ವಿಶ್ವ ವೇದಿಕೆಯಲ್ಲಿ ಆಡಿದವಳಾಗುವವರೆಗೆ ಪ್ರತಿಯೊಂದು ಕ್ಷಣವೂ ನಿಮ್ಮ ಪ್ರೀತಿ, ತ್ಯಾಗ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗಿದೆ,” ಎಂದು ಹೇಳಿದ್ದಾರೆ.
ಭಾರತ ಸರ್ಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕ್ರೀಡಾ ಪ್ರಾಧಿಕಾರ ಹಾಗೂ ಮಹಿಳಾ ಕ್ರಿಕೆಟ್‌ಗೆ ಬೆಂಬಲ ನೀಡಿದ ಎಲ್ಲರಿಗೂ ಅವರು ಧನ್ಯವಾದ ಸಲ್ಲಿಸಿದ್ದಾರೆ.
“ಭಾರತದ ರಾಷ್ಟ್ರಪತಿ, ಭಾರತ ಸರ್ಕಾರ, ಕ್ರೀಡಾ ಪ್ರಾಧಿಕಾರ, ಬಿಸಿಸಿಐ ಹಾಗೂ ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲರಿಗೂ ಈ ಗೌರವಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಮಹಿಳಾ ಕ್ರಿಕೆಟ್‌ಗೆ ನಿರಂತರ ಬೆಂಬಲ ನೀಡುತ್ತಿರುವುದಕ್ಕೂ ನಾನು ಕೃತಜ್ಞಳಾಗಿದ್ದೇನೆ,” ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳು ಮತ್ತು ಪತ್ರಕರ್ತರಿಗೂ ಧನ್ಯವಾದ ತಿಳಿಸಿದ ಹರ್ಮನ್‌ಪ್ರೀತ್, “ನನ್ನ ಸಾಧನೆಗಳನ್ನು ಗುರುತಿಸಿ ಜಗತ್ತಿನ ಮುಂದೆ ತಂದು ನಿಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನನಗೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರೇರಣೆ ನೀಡಿದೆ,” ಎಂದಿದ್ದಾರೆ.
ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡ 2025ರಲ್ಲಿ ಐತಿಹಾಸಿಕ ಸಾಧನೆ ಮಾಡಿತ್ತು. ತವರಿನಲ್ಲಿ ನಡೆದ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಇದು ಹರ್ಮನ್‌ಪ್ರೀತ್ ಅವರ ಐದನೇ ವಿಶ್ವಕಪ್ ಭಾಗವಹಿಸುವಿಕೆಯೂ ಆಗಿತ್ತು.
ಕೊನೆಯಲ್ಲಿ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಅವರು, “ನನ್ನ ಏರುಪೇರುಗಳ ಎಲ್ಲ ಕ್ಷಣಗಳಲ್ಲೂ ನನ್ನೊಂದಿಗೆ ನಿಂತ ಪ್ರತಿಯೊಬ್ಬ ಅಭಿಮಾನಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ನನಗೆ ಅಮೂಲ್ಯ. ಭಾರತ ಜರ್ಸಿ ಧರಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದ್ದು, ದೇಶಕ್ಕಾಗಿ ನನ್ನ ಶ್ರೇಷ್ಠ ಕೊಡುಗೆಯನ್ನು ಮುಂದುವರಿಸುತ್ತೇನೆ,” ಎಂದು ಹೇಳಿದ್ದಾರೆ.




