ಅಮಾಯಕ ಶೀನ ಪೂಜಾರಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಗಂಗೊಳ್ಳಿ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಹಕಾರ: ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ
ಉಡುಪಿ: ಸರಕಾರಿ ಜಮೀನಿನಲ್ಲಿ ಕಲ್ಲುಕೋರೆ ಮಾಡಿ ಕೆಂಪುಕಲ್ಲು ಕಳವು ಮಾಡಿದ ಆರೋಪದ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಲಾಗಿರುವ ಆಲೂರಿನ ರಿಕ್ಷಾ ಚಾಲಕ ಶೀನ ಪೂಜಾರಿ ಅವರನ್ನು ಆರೋಪಿಯನ್ನಾಗಿ ಮಾಡಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಗಂಗೊಳ್ಳಿ ಪೊಲೀಸರು ದಾಖಲಿಸಿದ್ದ ಪ್ರಕರಣದಿಂದ ಶೀನ ಪೂಜಾರಿ ಅವರನ್ನು ಮುಕ್ತಗೊಳಿಸುವಂತೆ ಹೈಕೋರ್ಟ್ ಆದೇಶಿಸಿದ್ದು, ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಶೀನ ಪೂಜಾರಿ ಬಯಸಿದಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕುಂದಾಪುರ ತಾಲೂಕಿನ ಆಲೂರು ಗ್ರಾಮದ ನಿವಾಸಿ ಶೀನ ಪೂಜಾರಿ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದಾರೆ. ಪತ್ನಿ ಎಂಡೋಸಲ್ಫಾನ್ ಪೀಡಿತರಾಗಿದ್ದು, ಇಬ್ಬರು ಮಕ್ಕಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಟುಂಬದ ಜೀವನ ನಿರ್ವಹಣೆಗಾಗಿ ಶೀನ ಪೂಜಾರಿ ರಿಕ್ಷಾ ಚಲಾಯಿಸುತ್ತಿದ್ದಾರೆ.
2025ರ ಆಗಸ್ಟ್ 24ರಂದು ಆಲೂರಿನ ಉದಯ ಶೆಟ್ಟಿಯವರು ಗಂಗೊಳ್ಳಿಗೆ ತೆರಳಲು ಶೀನ ಪೂಜಾರಿಯವರ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯ ಹೊರಗಡೆ ರಿಕ್ಷಾ ನಿಲ್ಲಿಸಿ ಕಾಯುವಂತೆ ತಿಳಿಸಿ ಉದಯ ಶೆಟ್ಟಿಯವರು ಠಾಣೆಯೊಳಗೆ ತೆರಳಿದ್ದರು.
ಸುಮಾರು 30 ನಿಮಿಷಗಳ ಬಳಿಕ ಪೊಲೀಸ್ ಸಿಬ್ಬಂದಿಯೊಬ್ಬರು ಶೀನ ಪೂಜಾರಿಯವರನ್ನು ಠಾಣೆಯೊಳಗೆ ಕರೆದುಕೊಂಡು ಹೋಗಿ ಉದಯ ಶೆಟ್ಟಿಯವರ ಪರಿಚಯವಿದೆಯೇ ಎಂದು ವಿಚಾರಿಸಿದ್ದರು. ಬಳಿಕ ದಾಖಲೆಯೊಂದಕ್ಕೆ ಸಹಿ ಹಾಕುವಂತೆ ಸೂಚಿಸಿದ್ದರು. ತಮಗೆ ಓದಲು-ಬರೆಯಲು ಬರುವುದಿಲ್ಲ ಎಂದು ಶೀನ ಪೂಜಾರಿ ತಿಳಿಸಿದರೂ, ಇದು ಕೇವಲ ಔಪಚಾರಿಕ ದಾಖಲೆಯಾಗಿದ್ದು ಯಾವುದೇ ತೊಂದರೆಯಾಗುವುದಿಲ್ಲ ಎಂದು ಪೊಲೀಸರು ಹೇಳಿದ ಹಿನ್ನೆಲೆಯಲ್ಲಿ ಅವರು ಸಹಿ ಹಾಕಿದ್ದರು ಎಂದು ಪ್ರತಿಷ್ಠಾನ ಆರೋಪಿಸಿದೆ.
ಬಳಿಕ ಶೀನ ಪೂಜಾರಿಯವರ ಆಧಾರ್ ಕಾರ್ಡ್ ಪ್ರತಿಯನ್ನೂ ಪೊಲೀಸರು ಪಡೆದುಕೊಂಡಿದ್ದರು ಇದಾದ ಸುಮಾರು ಎರಡು ತಿಂಗಳ ಬಳಿಕ ಪೊಲೀಸರು ಶೀನ ಪೂಜಾರಿಯವರಿಗೆ ಕರೆ ಮಾಡಿ ನ್ಯಾಯಾಲಯದಿಂದ ನೋಟಿಸ್ ಬಂದಿದೆ ಎಂದು ತಿಳಿಸಿದ್ದರು. ಬಳಿಕ ಪೊಲೀಸರು ಅವರು ಇದ್ದ ಸ್ಥಳಕ್ಕೆ ತೆರಳಿ ನೋಟಿಸ್ ನೀಡಿ ಸಹಿ ಪಡೆದುಕೊಂಡಿದ್ದರು.
ನೋಟಿಸ್ನ್ನು ಪರಿಚಯಸ್ಥರೊಬ್ಬರಿಂದ ಓದಿಸಿದಾಗ, ಸರಕಾರಿ ಜಮೀನಿನಲ್ಲಿ ಕಲ್ಲುಕೋರೆ ಮಾಡಿ ಕೆಂಪುಕಲ್ಲು ಕಳವು ಮಾಡಿದ ಆರೋಪದ ಪ್ರಕರಣದಲ್ಲಿ ಉದಯ ಶೆಟ್ಟಿಯವರನ್ನು ಮೊದಲ ಆರೋಪಿಯಾಗಿ ಹಾಗೂ ಶೀನ ಪೂಜಾರಿಯವರನ್ನು ಎರಡನೇ ಆರೋಪಿಯಾಗಿ ಸೇರಿಸಿರುವುದು ತಿಳಿದುಬಂದಿತ್ತು.
ಉದಯ ಶೆಟ್ಟಿಯವರ ವ್ಯವಹಾರಗಳು, ಕಲ್ಲುಕೋರೆಗಳು ಅಥವಾ ಪೊಲೀಸರು ವಶಪಡಿಸಿಕೊಂಡಿರುವ ಆಸ್ತಿಗಳ ಕುರಿತು ಯಾವುದೇ ಮಾಹಿತಿಯಿಲ್ಲದಿದ್ದರೂ ತಮ್ಮನ್ನು ಕಳ್ಳತನದ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿ ಶೀನ ಪೂಜಾರಿ ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದರು.
ಆ ವೇಳೆ ಪೊಲೀಸರು, ಇದು ಸಣ್ಣ ಪ್ರಕರಣವಾಗಿದ್ದು ನ್ಯಾಯಾಲಯದ ಮುಂದೆ ತಪ್ಪನ್ನು ಒಪ್ಪಿಕೊಂಡರೆ ಒಂದೆರಡು ವಿಚಾರಣೆಯಲ್ಲಿ ಪ್ರಕರಣ ಮುಗಿಯಲಿದೆ ಎಂದು ಸಮಾಧಾನಪಡಿಸಿದ್ದರು ಎಂದು ಪ್ರತಿಷ್ಠಾನ ಹೇಳಿದೆ.
ಆದರೆ ತಾವು ಮಾಡದ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳಲು ಶೀನ ಪೂಜಾರಿ ನಿರಾಕರಿಸಿದ್ದರು. ಪ್ರಕರಣದಿಂದ ಹೊರಬರಲು ಮಾರ್ಗ ಕಾಣದೆ ಮಾನಸಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು.
ಕಾನೂನು ವಿದ್ಯಾರ್ಥಿಯೊಬ್ಬರ ಸಲಹೆಯ ಮೇರೆಗೆ ಶೀನ ಪೂಜಾರಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದ್ದರು. ಕೋರ್ಟ್ ಸಮನ್ಸ್ ಹೊರತುಪಡಿಸಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ ಎನ್ನಲಾಗಿದೆ.
ಪ್ರಕರಣದ ದಾಖಲೆಗಳ ಅಧಿಕೃತ ಪ್ರತಿಗಳನ್ನು ಪಡೆದು ಪರಿಶೀಲಿಸಿದ ಬಳಿಕ, ಶೀನ ಪೂಜಾರಿಯವರ ಪರವಾಗಿ ಕಾನೂನು ಹೋರಾಟ ನಡೆಸಲು ಪ್ರತಿಷ್ಠಾನ ನಿರ್ಧರಿಸಿತು. ಪ್ರತಿಷ್ಠಾನದ ವಕೀಲ ಎನ್. ವಿವೇಕಾನಂದ ಅವರ ಮೂಲಕ ಕರ್ನಾಟಕ ಹೈಕೋರ್ಟ್ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿ, ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದಿಂದ ಶೀನ ಪೂಜಾರಿ ಅವರನ್ನು ಮುಕ್ತಗೊಳಿಸುವಂತೆ ಮನವಿ ಮಾಡಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು, ಶೀನ ಪೂಜಾರಿ ಅವರನ್ನು ಆರೋಪಿಯನ್ನಾಗಿ ಮಾಡಲು ಇರುವ ಆಧಾರಗಳ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಿಂದ ಮಾಹಿತಿ ಕೇಳಲು ಸೂಚಿಸಿತ್ತು ಎಂದು ಪ್ರತಿಷ್ಠಾನ ತಿಳಿಸಿದೆ.
ನಾಲ್ಕು ಬಾರಿ ಅವಕಾಶ ನೀಡಿದರೂ ಪೊಲೀಸ್ ಠಾಣೆಯಿಂದ ಯಾವುದೇ ಸಮರ್ಪಕ ಉತ್ತರ ಅಥವಾ ಸಮಜಾಯಿಷಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, 2026ರ ಆಗಸ್ಟ್ 6ರಂದು ಹೈಕೋರ್ಟ್ ಅಂತಿಮ ಆದೇಶ ನೀಡಿದ್ದು, ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯಲ್ಲಿನ ಶೀನ ಪೂಜಾರಿ ಅವರ ವಿರುದ್ಧದ ಆರೋಪವನ್ನು ರದ್ದುಪಡಿಸಿ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಹಕಾರ
ಶೀನ ಪೂಜಾರಿ ಅವರ ವಿರುದ್ಧದ ಆರೋಪಗಳಿಗೆ ಆಧಾರವಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಅವರ ಮಾನಹಾನಿಯಾಗಿರುವುದು ಸ್ಪಷ್ಟವಾಗಿದೆ ಎಂದು ಡಾ. ರವೀಂದ್ರನಾಥ್ ಶ್ಯಾನುಭಾಗ್ ಹೇಳಿದ್ದಾರೆ.
“ಶೀನ ಪೂಜಾರಿ ಬಯಸಿದಲ್ಲಿ, ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿದರೆಂದು ಆರೋಪಿಸಲಾಗಿರುವ ಪೊಲೀಸರ ವಿರುದ್ಧ ಸೂಕ್ತ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಎಲ್ಲಾ ರೀತಿಯ ಕಾನೂನು ಸಹಕಾರ ನೀಡಲಿದೆ” ಎಂದು ಅವರು ತಿಳಿಸಿದ್ದಾರೆ.
ಶೀನ ಪೂಜಾರಿಯಿಂದ ಸಹಿ ಮಾಡಿಸಿಕೊಂಡ ದಾಖಲೆಯಲ್ಲಿ ಏನಿತ್ತು?
ಪ್ರತಿಷ್ಠಾನ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಪೊಲೀಸರು ಶೀನ ಪೂಜಾರಿಯವರಿಂದ ಪಡೆದಿದ್ದ ದಾಖಲೆಯಲ್ಲಿ ಅವರು ಉದಯ ಶೆಟ್ಟಿಯವರೊಂದಿಗೆ ಸೇರಿಕೊಂಡು ಕೆಂಪುಕಲ್ಲುಗಳನ್ನು ಕಡಿದು ಸಾಗಾಟ ಮಾಡಲು ನಿರ್ಧರಿಸಿದ್ದಾಗಿ ಹಾಗೂ ಏಪ್ರಿಲ್ 17, 2025ರಂದು ಇಬ್ಬರೂ ಸೇರಿ ಕೆಂಪುಕಲ್ಲು ಕತ್ತರಿಸುತ್ತಿದ್ದಾಗ ಪೊಲೀಸರು ಬರುವುದನ್ನು ಕಂಡು ಉಪಕರಣಗಳು ಮತ್ತು ಮಿನಿ ಟಿಪ್ಪರ್ನ್ನು ಸ್ಥಳದಲ್ಲೇ ಬಿಟ್ಟು ಓಡಿಹೋದರೆಂದು ಹೇಳಿಕೆ ದಾಖಲಿಸಲಾಗಿತ್ತು.
ಈ ಹೇಳಿಕೆಯನ್ನು ತಾವು ಯಾವುದೇ ಒತ್ತಡ ಅಥವಾ ಪ್ರಲೋಭನೆಗೆ ಒಳಗಾಗಿ ನೀಡಿಲ್ಲ, ಸ್ವಇಚ್ಛೆಯಿಂದ ನೀಡಿರುವುದಾಗಿ ದಾಖಲೆಯಲ್ಲಿ ಉಲ್ಲೇಖಿಸಲಾಗಿತ್ತು ಎಂದು ಪ್ರತಿಷ್ಠಾನ ತಿಳಿಸಿದೆ.
ಸಹಿ ಮಾಡುವ ಮುನ್ನ ಜಾಗ್ರತೆ ವಹಿಸಿ
ಪೊಲೀಸರು ಯಾವುದೇ ಪ್ರಕರಣದ ವಿಚಾರಣೆಗೆ ಅಥವಾ ದಾಖಲೆಗೆ ಸಹಿ ಪಡೆಯಲು ಕರೆ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಡಾ. ರವೀಂದ್ರನಾಥ್ ಶ್ಯಾನುಭಾಗ್ ಸಲಹೆ ನೀಡಿದ್ದಾರೆ.
- ಪೊಲೀಸ್ ಠಾಣೆಗೆ ಹಾಜರಾಗುವಂತೆ ಲಿಖಿತ ನೋಟಿಸ್ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
- ನೋಟಿಸ್ನಲ್ಲಿ ಕ್ರೈಂ ನಂಬರ್, ಅಪರಾಧ ಮತ್ತು ಎಫ್ಐಆರ್ಗೆ ಸಂಬಂಧಿಸಿದ ವಿವರಗಳಿವೆಯೇ ಎಂದು ಗಮನಿಸಬೇಕು.
- ಸಾಮಾನ್ಯ ಫೋನ್ ಕರೆ ಅಥವಾ ವಾಟ್ಸಾಪ್ ಸಂದೇಶ ಬಂದ ಕಾರಣಕ್ಕೆ ಮಾತ್ರ ಠಾಣೆಗೆ ತೆರಳುವ ಮುನ್ನ ಕಾನೂನು ಸಲಹೆ ಪಡೆಯಬಹುದು.
- ಪೊಲೀಸರು ನೀಡುವ ಯಾವುದೇ ದಾಖಲೆಗೆ ಸಹಿ ಮಾಡುವ ಮೊದಲು ಅದರಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.
- ಅಗತ್ಯವಿದ್ದಲ್ಲಿ ವಿಚಾರಣೆಗೆ ತೆರಳುವ ಮೊದಲು ವಕೀಲರ ಸಲಹೆ ಪಡೆಯಬಹುದು ಅಥವಾ ವಕೀಲರ ನೆರವು ಪಡೆದುಕೊಳ್ಳಬಹುದು.
- ತಮ್ಮ ವಿರುದ್ಧ ಸಾಕ್ಷಿಯಾಗುವಂತೆ ಯಾವುದೇ ಹೇಳಿಕೆ ನೀಡಲು ವ್ಯಕ್ತಿಯನ್ನು ಬಲವಂತಪಡಿಸಲಾಗುವುದಿಲ್ಲ ಎಂಬ ಸಂವಿಧಾನಾತ್ಮಕ ಹಕ್ಕುಗಳ ಕುರಿತು ಸಾರ್ವಜನಿಕರು ಅರಿವು ಹೊಂದಿರಬೇಕು.




