ಪುಣೆ: ಕೇತನ್ ಅಗರ್‌ವಾಲ್ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಪುಣೆ ಗ್ರಾಮೀಣ ಪೊಲೀಸರು ಲೋಹಗಢ ಕೋಟೆಯಲ್ಲಿ ಅಪರಾಧ ನಡೆದ ಸ್ಥಳವನ್ನು ಮರುಸೃಷ್ಟಿ (Crime Scene Reconstruction) ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಕೇತನ್ ಸಾವಿಗೆ ಕಾರಣವಾದ ಘಟನೆಗಳ ಕ್ರಮವನ್ನು ಮರುಪರಿಶೀಲಿಸಿ, ಆರೋಪಿಗಳಾದ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಎನ್ನಲಾದ ಚೇತನ್ ಬಾಬುಲಾಲ್ ಚೌಧರಿ ನೀಡಿರುವ ವಿವರಗಳನ್ನು ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಘಟನಾ ಸ್ಥಳ ಮರುಸೃಷ್ಟಿಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಆದರೆ ತನಿಖೆಯ ಹಿತದೃಷ್ಟಿಯಿಂದ ದಿನಾಂಕ ಮತ್ತು ಸಮಯವನ್ನು ಬಹಿರಂಗಪಡಿಸಿಲ್ಲ.
ತನಿಖಾಧಿಕಾರಿಗಳ ಪ್ರಕಾರ, ಈ ಮರುಸೃಷ್ಟಿಯ ಮೂಲಕ ಕೇತನ್‌ನನ್ನು ಹೇಗೆ ಕೊಲೆ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಪ್ರಯತ್ನಿಸಲಾಗುತ್ತದೆ. ಘಟನೆ ನಡೆದ ಸಂದರ್ಭದಲ್ಲಿ ಕೇತನ್, ಸಿಯಾ ಮತ್ತು ಚೇತನ್ ಯಾವ ಸ್ಥಳದಲ್ಲಿದ್ದರು, ಕೇತನನನ್ನು ಯಾವ ಸ್ಥಳದಿಂದ ತಳ್ಳಲಾಯಿತು ಹಾಗೂ ಅವರು ಎಷ್ಟು ದೂರ ಕಂದಕಕ್ಕೆ ಬಿದ್ದರು ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ವೇಳೆ ಡಮ್ಮಿ (ನಕಲಿ) ದೇಹವನ್ನು ಬಳಸಲಾಗುತ್ತದೆ.
ಘಟನೆಗೆ ಯಾವುದೇ ನೇರ ಸಾಕ್ಷಿದಾರರು ಇಲ್ಲದಿರುವುದರಿಂದ, ತನಿಖೆ ಬಹುತೇಕ ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಪೊಲೀಸರು ಪ್ರಕರಣದ ಪ್ರತಿಯೊಂದು ಆಯಾಮವನ್ನು ಪರಿಶೀಲಿಸುತ್ತಿದ್ದು, ಘಟನೆಗೂ ಮುನ್ನ ಹಾಗೂ ನಂತರ ನಡೆದ ಬೆಳವಣಿಗೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಇವರಲ್ಲಿ ಚೇತನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಕೂಡ ಒಬ್ಬರು. ಅವರನ್ನು 24 ಗಂಟೆಗಳಿಗೂ ಹೆಚ್ಚು ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆದರೆ ಪ್ರಕರಣದಲ್ಲಿ ಅವರ ನೇರ ಪಾತ್ರಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಪೊಲೀಸರಿಗೆ ಲಭ್ಯವಾಗಿಲ್ಲ.
ಆದರೆ, ಘಟನೆ ನಡೆದ ದಿನ ಚೇತನ್ ತನ್ನ ಮೊಬೈಲ್ ಫೋನ್ ಬಿಟ್ಟು ನೀರಜ್‌ನ ಮೊಬೈಲ್ ಬಳಸಿದ್ದಾಗಿ ನೀರಜ್ ಒಪ್ಪಿಕೊಂಡಿದ್ದಾನೆ. ಆದರೆ ಚೇತನ್‌ನ ಉದ್ದೇಶ ಏನು ಎಂಬುದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ. ಇದೇ ಕಾರಣದಿಂದ ನೀರಜ್ ಅವರನ್ನು ಪ್ರಮುಖ ಸಾಕ್ಷಿದಾರನನ್ನಾಗಿ ಪರಿಗಣಿಸುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದರ ಮಧ್ಯೆ, ಸಿಯಾ ಗೋಯಲ್ ಅವರ ಪೋಷಕರು ಸಾರ್ವಜನಿಕವಾಗಿ ಪ್ರತಿಕ್ರಿಯಿಸಿ, ತಮ್ಮ ಮಗಳು ತಪ್ಪಿತಸ್ಥಳಾಗಿದ್ದರೆ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ, ಕೇತನ್‌ರನ್ನು ತಳ್ಳಿದ ಸ್ಥಳದಿಂದಲೇ ಆಕೆಯನ್ನೂ ತಳ್ಳಬೇಕು ಎಂಬ ಭಾವನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಮುಂದುವರಿದಿದೆ.
ಪೊಲೀಸರ ಆರೋಪದ ಪ್ರಕಾರ, ಸಿಯಾ ಮತ್ತು ಚೇತನ್ ಸೇರಿ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿರುವ ಲೋಹಗಢ ಕೋಟೆಯಿಂದ 26 ವರ್ಷದ ಕೇತನ್ ಅಗರ್‌ವಾಲ್ ಅವರನ್ನು ತಳ್ಳಿದ್ದು, ಅವರು ಮೃತಪಟ್ಟಿದ್ದಾರೆ. ಆರಂಭದಲ್ಲಿ ಈ ಘಟನೆ ಟ್ರೆಕ್ಕಿಂಗ್ ವೇಳೆ ನಡೆದ ಅಪಘಾತ ಎಂದು ದಾಖಲಾಗಿದ್ದರೂ, ನಂತರ ತನಿಖೆಯಲ್ಲಿ ಹೊಸ ತಿರುವು ಸಿಕ್ಕಿದೆ.
ಪೊಲೀಸರ ಪ್ರಕಾರ, ತನ್ನ ಹೇಳಿಕೆಯಲ್ಲಿ ಸಿಯಾ, ಕೇತನ್ ತನ್ನ ಕುಟುಂಬವು ಪ್ರಭಾವಶಾಲಿ ಹಾಗೂ ಶ್ರೀಮಂತವಾಗಿದ್ದು, ಮದುವೆಯಿಂದ ಹಿಂದೆ ಸರಿಯಲು ಅಥವಾ ಓಡಿಹೋಗಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾಳೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ಇನ್ನೂ ನ್ಯಾಯಾಂಗ ಪರಿಶೀಲನೆಯಲ್ಲಿದೆ.
ತನಿಖೆಯ ಪ್ರಕಾರ, ಸಿಯಾ ಹಲವು ಬಾರಿ ಕೇತನ್ ಅವರನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಳು. ಸಮುದ್ರಮಟ್ಟದಿಂದ ಸುಮಾರು 3,300 ಅಡಿ ಎತ್ತರದಲ್ಲಿರುವ ಈ ಕೋಟೆ ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿದೆ.
ಮೇ 31ರಂದು ಇಬ್ಬರೂ ಮೊದಲ ಬಾರಿ ಕೋಟೆಗೆ ಭೇಟಿ ನೀಡಿದ್ದರು. ಬಳಿಕ ಜೂನ್ 4ರಂದು ಮತ್ತೊಮ್ಮೆ ಹೋಗಲು ಸಿಯಾ ಒತ್ತಾಯಿಸಿದ್ದರೂ, ಕೇತನ್ ತಾಯಿ ಅನುಮತಿ ನೀಡಿರಲಿಲ್ಲ.
ಜೂನ್ 14ರಂದು ನಡೆದ ಮತ್ತೊಂದು ಭೇಟಿಯ ವೇಳೆ ಸಿಯಾ ಕೇತನನನ್ನು ಕಂದಕಕ್ಕೆ ತಳ್ಳಲು ಯತ್ನಿಸಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ.
ಆ ವೇಳೆ ಕೇತನ್ ಪೊದೆಯನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ, ಹಾವನ್ನು ನೋಡಿ ಹೆದರಿದ ಕಾರಣ ನಿನ್ನನ್ನು ತಳ್ಳಿದೆ ಎಂದು ಸಿಯಾ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಜೂನ್ 18ರಂದು ನಡೆದ ಮತ್ತೊಂದು ಭೇಟಿಯ ವೇಳೆ ಕೇತನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇತ್ತ, ಸಿಯಾ ತಾಯಿ ಪ್ರತಿಕ್ರಿಯಿಸಿ, ಟ್ರೆಕ್ಕಿಂಗ್‌ಗೆ ಹೋಗುವ ಆಸಕ್ತಿ ತಮ್ಮ ಮಗಳಿಗೆ ಇರಲಿಲ್ಲ. ಕೇತನನೇ ಹೋಗಲು ಒತ್ತಾಯಿಸಿದ್ದನು. ಅಲ್ಲದೆ, ಕೇತನ್ ತಾಯಿಯೇ ಸಿಯಾಗೆ ಹೋಗುವಂತೆ ಮನವೊಲಿಸಿದ್ದರು ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಸಿಯಾ ಕಳೆದ ವರ್ಷ ವ್ಯವಹಾರಿಕ ಸಭೆಯಲ್ಲಿ ಚೇತನ್ ಅವರನ್ನು ಭೇಟಿಯಾಗಿದ್ದರು. 2025ರ ನವೆಂಬರ್‌ನಲ್ಲಿ, ಸಿಯಾ ಮತ್ತು ಕೇತನ್ ಮದುವೆ ಸಿದ್ಧತೆಗಳು ನಡೆಯುತ್ತಿದ್ದ ಸಮಯದಲ್ಲೇ ಇಬ್ಬರ ನಡುವೆ ಪ್ರೇಮ ಸಂಬಂಧ ಆರಂಭವಾಗಿತ್ತು ಎನ್ನಲಾಗಿದೆ.
ಸಿಯಾ ಬೇಕರಿ ನಡೆಸುತ್ತಿದ್ದರೆ, ಚೇತನ್ ಒಣಹಣ್ಣುಗಳ ವ್ಯಾಪಾರ ನಡೆಸುತ್ತಿದ್ದನು. ಕೇತನ್ ತಮ್ಮ ಕುಟುಂಬದ ‘ಸಕ್ಸೆಸ್ ಗ್ರೂಪ್’ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ನಿರ್ದೇಶಕ ಹಾಗೂ ಮುಖ್ಯ ಮಾರುಕಟ್ಟೆ ಅಧಿಕಾರಿ (Chief Marketing Officer) ಆಗಿ ಕಾರ್ಯನಿರ್ವಹಿಸುತ್ತಿದ್ದರು.




