ಕೌಲಾಲಂಪುರ: ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಉಂಟಾಗಿರುವ ಸಾರಿಗೆ ಮತ್ತು ಪ್ರಯಾಣದ ಅಡಚಣೆಗಳು ಹಾಗೂ ವ್ಯವಸ್ಥಾಪನಾ ಸವಾಲುಗಳ ಕಾರಣದಿಂದ ಎಎಫ್‌ಸಿ ಏಷ್ಯನ್ ಕಪ್ ಸೌದಿ ಅರೇಬಿಯಾ 2027 ಫುಟ್‌ಬಾಲ್ ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಸೌದಿ ಅರೇಬಿಯಾ ಫುಟ್‌ಬಾಲ್ ಫೆಡರೇಶನ್ ಮತ್ತು ಏಷ್ಯನ್ ಫುಟ್‌ಬಾಲ್ ಒಕ್ಕೂಟ (ಎಎಫ್‌ಸಿ) ಮಂಗಳವಾರ ಪ್ರಕಟಿಸಿವೆ.
ಮೂಲ ವೇಳಾಪಟ್ಟಿಯ ಪ್ರಕಾರ 2027ರ ಜನವರಿ 7ರಿಂದ ಫೆಬ್ರವರಿ 5ರವರೆಗೆ ನಡೆಯಬೇಕಿದ್ದ ಈ ಟೂರ್ನಿಯು ಇದೀಗ 2027ರ ಡಿಸೆಂಬರ್ 23ರಿಂದ 2028ರ ಜನವರಿ 21ರವರೆಗೆ ನಡೆಯಲಿದೆ. ಟೂರ್ನಿಯ ಸ್ಥಳೀಯ ಆಯೋಜನಾ ಸಮಿತಿ (ಎಲ್‌ಒಸಿ) ಹಾಗೂ ಸೌದಿ ಅರೇಬಿಯಾ ಫುಟ್‌ಬಾಲ್ ಫೆಡರೇಶನ್‌ನೊಂದಿಗೆ ಸುದೀರ್ಘ ಚರ್ಚೆ ಮತ್ತು ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಟೂರ್ನಿಯ ಕ್ರೀಡಾಂಗಣಗಳು ಹಾಗೂ ಪಂದ್ಯಗಳ ವೇಳಾಪಟ್ಟಿಯನ್ನು ಎಎಫ್‌ಸಿ ಮತ್ತು ಸ್ಥಳೀಯ ಆಯೋಜನಾ ಸಮಿತಿ ಪ್ರಕಟಿಸಿದ ಒಂದು ವಾರದ ಬಳಿಕ ಮುಂದೂಡಿಕೆ ನಿರ್ಧಾರ ಹೊರಬಿದ್ದಿದೆ.
ಪ್ರಸ್ತುತ ಪ್ರದೇಶದಲ್ಲಿ ಉಂಟಾಗಿರುವ ಅಸಾಧಾರಣ ಪರಿಸ್ಥಿತಿಗಳು, ವ್ಯವಸ್ಥಾಪನಾ ಸವಾಲುಗಳು ಹಾಗೂ ಪ್ರಯಾಣದ ಅಡಚಣೆಗಳನ್ನು ಪರಿಗಣಿಸಿ ಪ್ರಮುಖ ರಾಷ್ಟ್ರೀಯ ತಂಡಗಳ ಫುಟ್‌ಬಾಲ್ ಟೂರ್ನಿಯನ್ನು ಮರುನಿಗದಿಪಡಿಸಲು ಆಯೋಜನಾ ಸಮಿತಿ ಅನುಮೋದನೆ ನೀಡಿದೆ. ಟೂರ್ನಿಯ ಹೊಸ ದಿನಾಂಕಗಳನ್ನು ಅನುಮೋದನೆಗಾಗಿ ಫಿಫಾಗೆ ಸಲ್ಲಿಸಲಾಗುವುದು ಎಂದು ಎಎಫ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 10ರಂದು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದು, 309 ಮಂದಿ ಗಾಯಗೊಂಡಿದ್ದರು. ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ವರದಿಯಾಗಿದೆ.
ಈ ದಾಳಿಯಿಂದಾಗಿ ಮೂಲ ವೇಳಾಪಟ್ಟಿಯಂತೆ ಟೂರ್ನಿಯನ್ನು ಆಯೋಜಿಸುವಲ್ಲಿ ಅಸಾಧಾರಣ ಸವಾಲುಗಳು ಎದುರಾಗಿವೆ. ಭಾಗವಹಿಸುವ ತಂಡಗಳು, ಅಧಿಕಾರಿಗಳು, ಪ್ರೇಕ್ಷಕರು ಹಾಗೂ ಇತರ ಸಂಬಂಧಪಟ್ಟ ಎಲ್ಲರ ಹಿತದೃಷ್ಟಿಯಿಂದ ಟೂರ್ನಿಯನ್ನು ಮುಂದೂಡುವುದು ಅನಿವಾರ್ಯವಾಗಿದೆ ಎಂದು ಎಎಫ್‌ಸಿ ತಿಳಿಸಿದೆ.
ರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಬಳಿಕ ಏಷ್ಯನ್ ಕಪ್ ಆಯೋಜನೆಯ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಆದರೆ, ಮುಂದಿನ ವರ್ಷದ ಜನವರಿಯಲ್ಲಿ ಟೂರ್ನಿ ಆರಂಭಿಸಲು ಸಿದ್ಧತೆಗಳು ನಿಗದಿತ ವೇಳಾಪಟ್ಟಿಯಂತೆ ಮುಂದುವರಿದಿವೆ ಎಂದು ಈ ಹಿಂದೆ ಸ್ಥಳೀಯ ಆಯೋಜನಾ ಸಮಿತಿ ತಿಳಿಸಿತ್ತು.
ಇದಕ್ಕೂ ಮೊದಲು, ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಜೆಡ್ಡಾದಲ್ಲಿ ಅಕ್ಟೋಬರ್ 16ರಿಂದ 25ರವರೆಗೆ ನಡೆಯಬೇಕಿದ್ದ ಫಿಫಾ ಮತ್ತು ಸೌದಿ ಇ-ಸ್ಪೋರ್ಟ್ಸ್ ಫೆಡರೇಶನ್‌ನ ಫಿಫಾಎ ಫೈನಲ್ಸ್ 2026 ಸ್ಪರ್ಧೆಯನ್ನೂ ಮುಂದೂಡಲಾಗಿತ್ತು.
ಇದೇ ದಾಳಿಯಿಂದ ಉಂಟಾದ ವ್ಯವಸ್ಥಾಪನಾ ಸವಾಲುಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ನಡೆಯಬೇಕಿದ್ದ ಸಿಕ್ಸ್ ಕಿಂಗ್ಸ್ ಸ್ಲ್ಯಾಮ್ ಟೆನಿಸ್ ಪ್ರದರ್ಶನ ಪಂದ್ಯಾವಳಿಯನ್ನೂ ಮುಂದೂಡಲಾಗಿದ್ದು, ಇದೀಗ ಅದು 2026ರ ಡಿಸೆಂಬರ್ 27ರಿಂದ 30ರವರೆಗೆ ನಡೆಯಲಿದೆ.




