ನವದೆಹಲಿ: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, 14 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
38 ವರ್ಷದ ಮ್ಯಾಕ್ಸ್ವೆಲ್ ಕಳೆದ ವರ್ಷ ಜೂನ್ನಲ್ಲಿ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲ ಮಾದರಿಗಳಿಂದಲೂ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ಅವರು ಆಸ್ಟ್ರೇಲಿಯಾ ಪರ 149 ಏಕದಿನ, 130 ಟಿ20 ಹಾಗೂ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2021ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು.
ಟಿ20 ವಿಶ್ವಕಪ್ಗೂ ಮೊದಲು ಮತ್ತು ನಂತರ ನಿವೃತ್ತಿ ಕುರಿತು ಹಲವು ಬಾರಿ ಚರ್ಚೆ ನಡೆದಿತ್ತು. ಆಸ್ಟ್ರೇಲಿಯಾ ತಂಡದ ಆಡಳಿತ ಮಂಡಳಿಯಿಂದ ಯಾವುದೇ ಒತ್ತಡವಿರಲಿಲ್ಲ. ಭವಿಷ್ಯದ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಕೆಲವು ಸರಣಿಗಳಲ್ಲಿ ಹೊಸ ಆಟಗಾರರಿಗೆ ಮಣೆ ಹಾಕಲಾಗಿತ್ತು. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿರುವುದನ್ನು ಗಮನಿಸಿದ್ದೇವೆ ಎಂದು ಮ್ಯಾಕ್ಸ್ವೆಲ್ ‘ದಿ ಫೈನಲ್ ವರ್ಡ್’ ಪಾಡ್ಕಾಸ್ಟ್ನಲ್ಲಿ ತಿಳಿಸಿದ್ದಾರೆ.
“ನನ್ನ ವೃತ್ತಿಜೀವನದಲ್ಲಿ ಉಳಿದಿರುವ ಕೆಲವು ಪ್ರಮುಖ ಟೂರ್ನಿಗಳಲ್ಲಿ ಉತ್ತಮವಾಗಿ ಆಡಲು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕಾದ ಸಮಯ ಬಂದಿದೆ. ಹೀಗಾಗಿ ದೇಹದ ಆರೋಗ್ಯ ಮತ್ತು ಫಿಟ್ನೆಸ್ಗೆ ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಒಮಾನ್ ವಿರುದ್ಧ ಆಸ್ಟ್ರೇಲಿಯಾ ಆಡಿದ ಕೊನೆಯ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಅಂತಿಮವಾಗಿ ದೇಶವನ್ನು ಪ್ರತಿನಿಧಿಸಿದ್ದರು. ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ತಂಡದ ಅತ್ಯಂತ ಹಿರಿಯ ಆಟಗಾರರಾಗಿದ್ದ ಮ್ಯಾಕ್ಸ್ವೆಲ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾದ ಪರ 2,897 ರನ್ ಗಳಿಸಿದ್ದು, ಡೇವಿಡ್ ವಾರ್ನರ್ ಮತ್ತು ಆರನ್ ಫಿಂಚ್ ಬಳಿಕ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಐದು ಶತಕಗಳನ್ನು ಸಿಡಿಸಿರುವ ಮ್ಯಾಕ್ಸ್ವೆಲ್, ಭಾರತದ ರೋಹಿತ್ ಶರ್ಮಾ ಅವರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಇಬ್ಬರು ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ.
ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರಾಗಿದ್ದ ಮ್ಯಾಕ್ಸ್ವೆಲ್, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಶಕ್ತಿಯಾಗಿದ್ದರು. ಏಕದಿನ ಕ್ರಿಕೆಟ್ನಲ್ಲಿ 3,990 ರನ್ ಗಳಿಸಿರುವ ಅವರು 126.7ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 154.4ರ ಸ್ಟ್ರೈಕ್ರೇಟ್ನಲ್ಲಿ 2,897 ರನ್ ಗಳಿಸಿದ್ದಾರೆ. ಒಟ್ಟು 10 ಅಂತಾರಾಷ್ಟ್ರೀಯ ಶತಕ ಹಾಗೂ 136 ವಿಕೆಟ್ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
2023ರ ಏಕದಿನ ವಿಶ್ವಕಪ್ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಮ್ಯಾಕ್ಸ್ವೆಲ್ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. 292 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಸಂಕಷ್ಟದಲ್ಲಿದ್ದಾಗ, ಸ್ನಾಯು ಸೆಳೆತದಿಂದ ಬಳಲುತ್ತಿದ್ದರೂ ಕೇವಲ 128 ಎಸೆತಗಳಲ್ಲಿ ಅಜೇಯ 201 ರನ್ ಸಿಡಿಸಿ ತಂಡಕ್ಕೆ ಮೂರು ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದರು.
ಮ್ಯಾಕ್ಸ್ವೆಲ್ 2017ರಲ್ಲಿ ಆಸ್ಟ್ರೇಲಿಯಾ ಪರ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. ಒಟ್ಟು ಏಳು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅವರು ಬಳಿಕ ಹೆಚ್ಚಾಗಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲೇ ಗಮನಹರಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ, ಬಿಗ್ ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಟ ಮುಂದುವರಿಸಲಿದ್ದಾರೆ. 2027-28ರ ಋತುವಿನ ಅಂತ್ಯದವರೆಗೆ ಆ ತಂಡದೊಂದಿಗೆ ಒಪ್ಪಂದ ಹೊಂದಿದ್ದಾರೆ. ಇತ್ತೀಚೆಗೆ ವಿಕ್ಟೋರಿಯಾ ತಂಡದ ಪರ ಒಂದೆರಡು ಏಕದಿನ ಪಂದ್ಯಗಳಲ್ಲಿ ಆಡಿದ್ದ ಅವರು, ಇದೀಗ ಲಿಸ್ಟ್ ಎ ಕ್ರಿಕೆಟ್ಗೂ ವಿದಾಯ ಹೇಳಿದ್ದಾರೆ. 2023ರ ಬಳಿಕ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿಲ್ಲ.
ವಿಕ್ಟೋರಿಯಾ ಪರ ಆಡಿದ ಕೊನೆಯ ಏಕದಿನ ಪಂದ್ಯದ ಬಳಿಕ ಸಹ ಆಟಗಾರರೊಂದಿಗೆ ಮಾತನಾಡಿ, ರಾಜ್ಯ ತಂಡದ ಪರ ಇದೇ ತಮ್ಮ ಕೊನೆಯ ಪಂದ್ಯ ಎಂದು ತಿಳಿಸುವುದು ನಿರೀಕ್ಷೆಗಿಂತ ಹೆಚ್ಚು ಭಾವುಕ ಕ್ಷಣವಾಗಿತ್ತು ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಸಹ ಆಟಗಾರರು ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ದೊರೆತ ಬೆಂಬಲವನ್ನು ಸ್ಮರಿಸಿದ ಅವರು, ತಂಡದ ಮುಂದೆ ಮಾತನಾಡುವಾಗ ಭಾವುಕರಾಗಿದ್ದಾಗಿ ತಿಳಿಸಿದ್ದಾರೆ.




