ಕೊಲಂಬೊ: ಫೆಬ್ರುವರಿ 7ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ 2026ಕ್ಕೆ ದಿನಗಣನೆ ಆರಂಭವಾಗಿರುವ ನಡುವೆ, ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ಸ್ಟಾರ್ ವೇಗಿ ಹಾಗೂ ಮಾಜಿ ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ತಮ್ಮ ದೀರ್ಘಕಾಲದ ಬೆನ್ನುನೋವಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಹಿನ್ನೆಲೆ, ಆಸ್ಟ್ರೇಲಿಯಾ ಆಯ್ಕೆದಾರರು ಕಮ್ಮಿನ್ಸ್ ಬದಲಿಗೆ ಎಡಗೈ ವೇಗಿ ಬೆನ್ ದ್ವಾರ್ಶುಯಿಸ್ ಅವರನ್ನು 15 ಸದಸ್ಯರ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿ ಅಧ್ಯಕ್ಷ ಟೋನಿ ಡೋಡೆಮೈಡ್, “ಬೆನ್ ದ್ವಾರ್ಶುಯಿಸ್ ಚೆಂಡನ್ನು ವೇಗವಾಗಿ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಬುದ್ಧಿವಂತ ವೇರಿಯೇಷನ್‌ಗಳು, ಉತ್ತಮ ಫೀಲ್ಡಿಂಗ್ ಹಾಗೂ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕೊಡುಗೆ ನೀಡಬಲ್ಲ ಆಟಗಾರರಾಗಿದ್ದಾರೆ. ಭಾರತ ಮತ್ತು ಶ್ರೀಲಂಕಾದ ಪಿಚ್ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಅವರು ಸೂಕ್ತವಾಗಿರುತ್ತಾರೆ” ಎಂದು ಹೇಳಿದ್ದಾರೆ.
ಇದೇ ವೇಳೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮ್ಯಾಥ್ಯೂ ಶಾರ್ಟ್ ಅವರಿಗೆ ಈ ಬಾರಿ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಅವರ ಬದಲಿಗೆ ಅನುಭವಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ರೆನ್‌ಶಾ ಅವರನ್ನು ಆಯ್ಕೆ ಮಾಡಲಾಗಿದೆ. ರೆನ್‌ಶಾ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸ್ವರೂಪಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಆಸ್ಟ್ರೇಲಿಯಾ, ಕ್ವೀನ್ಸ್‌ಲ್ಯಾಂಡ್ ಬುಲ್ಸ್ ಮತ್ತು ಬ್ರಿಸ್ಬೇನ್ ಹೀಟ್ ತಂಡಗಳ ಪರವಾಗಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆಯ್ಕೆದಾರರು ತಿಳಿಸಿದ್ದಾರೆ.
“ಟಾಪ್-ಆರ್ಡರ್ ಬ್ಯಾಟ್ಸ್‌ಮನ್‌ಗಳು ಈಗಾಗಲೇ ಸ್ಥಿರವಾಗಿರುವುದರಿಂದ ಹಾಗೂ ಶ್ರೀಲಂಕಾದಲ್ಲಿ ನಡೆಯುವ ಆರಂಭಿಕ ಪಂದ್ಯಗಳು ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗುವ ನಿರೀಕ್ಷೆಯಿರುವುದರಿಂದ, ರೆನ್‌ಶಾ ಮಧ್ಯಮ ಕ್ರಮಾಂಕವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಟಿಮ್ ಡೇವಿಡ್ ಫಿಟ್ನೆಸ್ ಪ್ರೋಗ್ರಾಂ ಪೂರ್ಣಗೊಳಿಸಿದ ನಂತರವೇ ಲಭ್ಯವಿರುವುದರಿಂದ, ಅವರ ಅನುಪಸ್ಥಿತಿಯಲ್ಲಿ ರೆನ್‌ಶಾ ತಂಡಕ್ಕೆ ಉತ್ತಮ ಸಮತೋಲನ ನೀಡುತ್ತಾರೆ” ಎಂದು ಡೋಡೆಮೈಡ್ ವಿವರಿಸಿದರು.
ಟಿ20 ವಿಶ್ವಕಪ್ 2026ರಲ್ಲಿ ಆಸ್ಟ್ರೇಲಿಯಾ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಐರ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ ಮತ್ತು ಓಮನ್ ತಂಡಗಳೊಂದಿಗೆ ಮುಖಾಮುಖಿಯಾಗಲಿದೆ. ಆಸ್ಟ್ರೇಲಿಯಾ ಫೆಬ್ರುವರಿ 11ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಟಿ20 ವಿಶ್ವಕಪ್ 2026ಕ್ಕೆ ಆಸ್ಟ್ರೇಲಿಯಾ ತಂಡ:
ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ನಾಥನ್ ಎಲ್ಲಿಸ್, ಜಾಶ್ ಹೇಜಲ್‌ವುಡ್, ಆಡಮ್ ಜಂಪಾ, ಮ್ಯಾಥ್ಯೂ ಕುಹ್ನೆಮನ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಮ್ಯಾಥ್ಯೂ ರೆನ್‌ಶಾ.




