ತುಮಕೂರು: ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸ ಮುಂದೆ ನಡೆದಿದ್ದ ಗಲಭೆ ಪ್ರಕರಣದಲ್ಲಿ ಅಧಿಕಾರ ವಹಿಸಿಕೊಂಡ ದಿನವೇ ಅಮಾನತುಗೊಂಡಿರುವ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ.
ಜ. 2ರಂದು ಸಸ್ಪೆಂಡ್ ಆಗಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರು ತುಮಕೂರಿನ ಶಿರಾದಲ್ಲಿರುವ ಅವರ ಸ್ನೇಹಿತರ ಫಾರ್ಮ್ ಹೌಸ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರ ಸ್ನೇಹಿತರು, ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ. ಈ ಮಾಹಿತಿ ಸುಳ್ಳು ಎಂದು ಹೇಳಿದ್ದಾರೆ.
‘ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಅವರು ಆಸ್ಪತ್ರೆಗೂ ದಾಖಲಾಗಿಲ್ಲ. ದೂರು ಸಹ ಬಂದಿಲ್ಲ’. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಗಲಭೆಯ ದಿನದಂದು ಬೆಳಗ್ಗೆ ಪವನ್ ನೆಜ್ಜೂರು ಅವರು ಬಳ್ಳಾರಿಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬೆಳಗ್ಗೆಯೇ ಅವರು ಬಳ್ಳಾರಿಯ ಗ್ರಾಮದೇವತೆಯಾದ ದುರ್ಗಮ್ಮ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವಿಗೆ ಪೂಜೆ ಸಲ್ಲಿಸಿದ್ದರು. ಆದರೆ, ಅದೇ ದಿನ ಸಂಜೆ ಹೊತ್ತಿಗೆ ಜನಾರ್ದನ ರೆಡ್ಡಿಯವರ ನಿವಾಸದ ಮುಂದೆ ಗಲಾಟೆಯಾಗಿ, ತಡರಾತ್ರಿ ಗುಂಡಿನ ದಾಳಿ ಹಾಗೂ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದರು. ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿತ್ತು.




